ಬೆಂಗಳೂರು: ಅಗೋಚರ ಕೊರೋನಾ ವೈರಾಣು ತಾಂಡವಕ್ಕೆ ಇಡೀ ದೇಶವೇ ನಲುಗಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ತನ್ನ ನಿರ್ಧಾರಗಳಿಂದಾಗಿ ಇಡೀ ವಿಶ್ವದ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಕಳೆದೆರಡು ಬಾರಿ ದೇಶವನ್ನುದ್ದೇಶಿಸಿ ಮಾತನಾಡಿರುವ ನರೇಂದ್ರ ಮೋದಿ ಶುಕ್ರವಾರ ಮತ್ತೊಮ್ಮೆ ದೇಶದ ಜನತೆಗೆ ಸಂದೇಶವೊಂದನ್ನು ನೀಡಲಿದ್ದಾರೆ. ಆ ಸಂದೇಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಲಾಕ್ ಡೌನ್ ಘೋಷಣೆಯ ನಂತರ ಅವರು ಕೊರೋನಾ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರಾದರೂ ಭಾಷಣ ಮೂಲಕ ಜನರ ಮುಂದೆ ಬಂದು ನಿಂತಿಲ್ಲ. ಇದೀಗ ಶುಕ್ರವಾರ ಬೆಳಿಗ್ಗೆ ವೀಡಿಯೋ ಒಂದನ್ನು ಅವರು ಬಿಡುಗಡೆ ಮಾಡಲಿದ್ದಾರಂತೆ. ಈ ಬಾರಿ ಭಾಷಣ ಮಾಡದೆ, ಕೇವಲ ವೀಡಿಯೋ ತುಣುಕನ್ನು ಬಿಡುಗಡೆ ಮಾಡುವುದಾದರೂ ಯಾಕೆ? ಆ ವೀಡಿಯೋದಲ್ಲಿ ಅದೇನು ವಿಷಯ ಅಡಗಿರುತ್ತದೆ ಎಂಬುದೇ ಈಗಿರುವ ಕೌತುಕ.
ಶುಕ್ರವಾರ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಸರಿಯಾಗಿ, ಒಂದು ಚಿಕ್ಕ ವಿಡಿಯೋವನ್ನು ದೇಶದ ಜನರ ಜೊತೆ ಹಂಚಿಕೊಳ್ಳುವುದಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಲಾಕ್ ಡೌನ್ ಜಾರಿ ನಂತರ ನಂತರ ಅಧಿಕಾರಿಗಳು, ಮುಖ್ಯಮಂತ್ರಿಗಳು ಹಾಗೂ ಸಚಿವರ ಜೊತೆ ಪ್ರಧಾನಿಯವರು ನಿರಂತರ ಚರ್ಚೆ ನಡೆಸುತ್ತಲೇ ಇದ್ದಾರೆ. ಗುರುವಾರ ಕೂಡಾ ಅವರು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಈ ವಿಡಿಯೋ ಕಾನ್ಫೆರೆನ್ಸ್ ನಂತರ ಅವರು ಈ ಟ್ವೀಟ್ ಮಾಡಿ, ವಿಡಿಯೋ ರಹಸ್ಯದ ಕುತೂಹಲವನ್ನು ಹರಿಯಬಿಟ್ಟಿದ್ದಾರೆ.
ಏಪ್ರಿಲ್ 14 ರಂದು ಲಾಕ್ ಡೌನ್ ಅಂತ್ಯಗೊಳ್ಳುತ್ತಾ? ಮುಂದೆ ಕೂಡಾ ಕಠಿಣ ನಿರ್ಧಾರಗಳು ಘೋಷಣೆಯಾಗಬಹುದೇ? ಆರ್ಬಿಐ, ಟ್ರಾಯ್, ಸಹಿತ ಕೆಲ ಸ್ವಾಯತ್ತ ಸಂಸ್ಥೆಗಳು ಘೋಷಿಸಿರುವ ವಿಚಾರಗಲ್ಲಿನ ಗೊಂದಲಗಳನ್ನು ಬಗೆಹರಿಸುವ ಯೋಜನೆ ಅಥವಾ ಮುಂದಿನ ಯೋಚನೆಗಳು ಅವರ ವೀಡಿಯೋ ಸಂದೇಶದಲ್ಲಿರುತ್ತೋ ಎಂಬುದೇ ಈಗಿರುವ ಕುತೂಹಲ.