ಬ್ರೇಕ್ ಫಾಸ್ಟ್ ಹೆಸರಲ್ಲಿ ಒಗ್ಗಟ್ಟು ಪ್ರದರ್ಶನ; ಒಟ್ಟಾಗಿ ಆಡಳಿತ ನಡೆಸುತ್ತೇವೆ ಎಂದ ಸಿದ್ದು-ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಬಿಕ್ಕಟ್ಟು ಶಮನ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಶನಿವಾರ ಬೆಳಿಗ್ಗೆ ಒಟ್ಟಾಗಿ ಉಪಹಾರ ಸೇವಿಸಿ ಗಮನಸೆಳೆದರು. ಉಪಹಾರ ಮೂಲಕ ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ತೋರಿಸಲು ಹೈಕಮಾಡ್ ನಾಯಕರು ಹೇಳಿಕೊಟ್ಟ ಸೂತ್ರವನ್ನು ಸಿಎಂ ಡಿಸಿಎಂ ಪಾಲಿಸಿದ್ದಾರೆ. ಆದರೆ ಈ ಬೆಳವಣಿಗೆ ನಾಟಕೀಯ ರೀತಿಯಲ್ಲೇ ಇತ್ತೆ ವಿನಃ ಒಗ್ಗಟ್ಟು ಪ್ರದರ್ಶನದಂತೆ ಇರಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಉಪಹಾರ ಬಳಿಕ ನಿರೀಕ್ಷೆಯಂತೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಮಾಹಿತಿ ಹಂಚಿಕೊಂಡರು. ನಮ್ಮೊಳಗೆ ಭಿನ್ನಾಭಿಪ್ರಾಯವೇ ಇಲ್ಲ, ಒಗ್ಗಾಟಾಗಿವೆ ಇದ್ದೇವೆ. ಸದ್ಯದ ಗೊಂದಲಗಳಿಗೆ ಪ್ರತಿಪಕ್ಷ ಹಾಗೂ ಮಾಧ್ಯಮಗಳು ಕಾರಣ ಎಂದರು.

‘ಸುಮಾರು ಒಂದು ತಿಂಗಳಿನಿಂದ ಅನಗತ್ಯವಾಗಿ ಗೊಂದಲಗಳು ನಿರ್ಮಾಣವಾಗಿವೆ. ಹಾಗಾಗಿ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾನು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆಸಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ ಎಂದರು. ಇವತ್ತಿನ ವರೆಗೆ ಮಾತ್ರವಲ್ಲ ಮುಂದೆಯೂ ಇದೇ ತರ ಒಗ್ಗಟ್ಟಾಗಿಯೇ ಮುಂದುವರಿಯಲಿದ್ದೇವೆ’ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


ಹೈಕಮಾಂಡ್ ಸೂಚನೆಯಂತೆಯೇ ನಡೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಪುಟ ಪುನಾರಚನೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೆಲವು ಶಾಸಕರು ದೆಹಲಿಗೆ ಹೋಗಿದ್ದರು. ಸಚಿವಸ್ಥಾನ ಕೇಳಲು ಹೋಗಿದ್ದಾರೆಯೇ ಹೊರಟು ನಾಯಕತ್ವದ ವಿರುದ್ಧವಾಗಿ ಶಾಸಕರು ದೆಹಲಿಗೆ ಹೋಗಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.


ಡಿಕೆ ಶಿವಕುಮಾರ್ ಮಾತನಾಡಿ. ‘ರಾಜ್ಯದ ಜನ ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಅದರಂತೆ ನಡೆದುಕೊಂಡಿದ್ದೇವೆ’ ಎಂದು ತಿಳಿಸಿದರು. ವಿಧಾನಸಭೆ ಅಧಿವೇಶನದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿದ್ದೇನೆ ಎಂದ ಡಿಕೆಶಿ, ನಮ್ಮದು ಒಂದೇ ಗುಂಪು, ಹೈಕಮಾಂಡ್ ಗುಂಪು ಎಂದರು.

‘ನಾನು ಮತ್ತು ಸಿಎಂ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಒಮ್ಮತದಿಂದ ಆಡಳಿತ ಮಾಡಿಕೊಂಡು ಹೋಗುತ್ತೇವೆ’ ಎಂದು ಡಿಕೆ ಶಿವಕುಮಾರ್ ಹೇಳಿದರು.

Related posts