ಬೆಂಗಳೂರು-ಹೊಸೂರು ಮೆಟ್ರೋ ರೈಲು ವಿಸ್ತರಣೆ ಬೇಡ; ಸರ್ಕಾರಕ್ಕೆ ಕೆಪಿಸಿಸಿ ಸಲಹೆ.. ಕನ್ನಡ ಹೋರಾಟಗಾರರ ನಿಲುವು ಬೆಂಬಲಿಸಿ ಸಿಎಂಗೆ ರಮೇಶ್ ಬಾಬು ಪತ್ರ

ಬೆಂಗಳೂರು: ಹೊಸೂರು-ಬೆಂಗಳೂರು ಮೆಟ್ರೋ ರೈಲು ವಿಸ್ತರಣಾ ಯೋಜನೆ ಕೈಬಿಡಬೇಕೆಂಬ ಕನ್ನಡ ಪರ ಸಂಘಟನೆಗಳ ಆಗ್ರಹ ಸರಿಯಾಗಿದೆ ಎಂದಿರುವ ಆಡಳಿತ ಪಕ್ಷ ಕಾಂಗ್ರೆಸ್, ರಾಜ್ಯ ರಾಜಧಾನಿಯ ಹಿತ ಕಾಪಾಡುವ ನಿಟ್ಟಿನಲ್ಲಿ ಹೊಸೂರು- ಬೆಂಗಳೂರು ಮೆಟ್ರೋ ವಿಸ್ತರಣೆಗೆ ಅವಕಾಶ ನೀಡಬಾರದೆಂದು ಸಲಹೆ ಮಾಡಿದೆ. ಈ ಕುರಿತಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ.

ಪತ್ರದಲ್ಲೇನಿದೆ..?

ಜನಸಾಮಾನ್ಯರ ಉಪಯೋಗಕ್ಕಾಗಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸರ್ಕಾರ ಮೆಟ್ರೋ ರೈಲು ಯೋಜನೆಯನ್ನು ಜಾರಿಗೊಳಿಸಿದೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಟ್ರೋ ರೈಲು ಸೇವೆಯನ್ನು ನಗರದ ವಿವಿಧ ಭಾಗಗಳಿಗೆ ವಿಸ್ತರಿಸುವ ಅವಶ್ಯಕತೆ ಇರುತ್ತದೆ. ಇಂತಹ ವಿಸ್ತರಣೆಯು ಬೆಂಗಳೂರಿನ ಜನರಿಗೆ ಮತ್ತು ಕರ್ನಾಟಕದ ಜನರಿಗೆ ಹೆಚ್ಚು ತಲುಪಬೇಕಾಗಿದೆ ಎಂದು ರಮೇಶ್ ಬಾಬು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೆಂಗಳೂರು ಮಹಾನಗರಕ್ಕೆ ನಮ್ಮ ರಾಜ್ಯದ ಜನರು ಉದ್ಯೋಗ ಮತ್ತು ವ್ಯಾಪಾರದ ಕಾರಣಕ್ಕಾಗಿ ವಲಸೆ ಬಂದರೆ ರಾಜ್ಯದ ಹಿತದೃಷ್ಟಿಯಿಂದ ಕನ್ನಡಿಗರ ಹಿತರಕ್ಷಣೆಯನ್ನು ರಾಜ್ಯ ಸರ್ಕಾರ ಮಾಡಬೇಕಾಗಿರುತ್ತದೆ. ಅದೇ ರೀತಿ ಬೆಂಗಳೂರು ಮಹಾನಗರದಲ್ಲಿ ನೆಲೆಸಿರುವ ಜನಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಬೆಂಗಳೂರು ಮಹಾನಗರದಲ್ಲಿ ಸಾರಿಗೆ ದಟ್ಟಣೆಯ ಕಾರಣಕ್ಕಾಗಿ ಇತರೆ ರಾಜ್ಯದ ವಲಸಿಗರ ಮೇಲೆ ನಿಯಂತ್ರಣವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೇರುವುದೂ ಅನಿವಾರ್ಯವಾಗಿದೆ ಎಂದವರು ಹೇಳಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಬೆಂಗಳೂರು ಮಹಾನಗರವು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಒಂದು ಕಾಸ್ಮೋಪಾಲಿಟಿನ್ ನಗರವಾಗಿದ್ದು, ಇಲ್ಲಿನ ಬೆಳವಣಿಗೆಯ ಮೇಲೆ ಆರೋಗ್ಯಕರವಾದ ನಿಯಂತ್ರಣವನ್ನು ಹಾಕದೆ ಇದ್ದರೆ, ನಗರದಲ್ಲಿ ಸಾರಿಗೆ ಸಮಸ್ಯೆ ಜೊತೆಗೆ ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆ ನಿರ್ಮಾಣ ಹಾಗು ಇತರೆ ಮೂಲಭೂತ ಸೌಕರ್ಯಗಳ ಸಮಸ್ಯೆ ಹೆಚ್ಚಾಗುತ್ತದೆ. ಇವುಗಳ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯವು ಚೆನ್ನೈ ಮೆಟ್ರೋ ರೈಲ್ವೆ ಸಂಸ್ಥೆಯ ಮೂಲಕ ಹೊಸೂರು-ಬೆಂಗಳೂರು ಮಹಾನಗರದ ದೃಷ್ಟಿಯಿಂದ ತಡೆಯಬೇಕಾಗುತ್ತದೆ ಎಂದು ರಮೇಶ್ ಬಾಬು ಅವರು ಸರ್ಕಾರದ ಗಮನಸೆಳೆದಿದ್ದಾರೆ.

ಅನೇಕ ಕನ್ನಡ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಬೆಂಗಳೂರಿನ ಮತ್ತು ಕರ್ನಾಟಕದ ಹಿತರಕ್ಷಣೆಯ ದೃಷ್ಟಿಯಿಂದ ಹೊಸೂರು-ಬೆಂಗಳೂರು ಮೆಟ್ರೋ ಸಂಪರ್ಕಕ್ಕೆ ಅವಕಾಶ ನೀಡದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯದ ಹಿತಾಸಕ್ತಿಯ ಸಂರಕ್ಷಣೆಯ ದೃಷ್ಟಿಯಿಂದ ಕನ್ನಡಪರ ಸಂಘಟನೆಗಳು ಮತ್ತು ಇತರರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದು, ಕನ್ನಡಿಗರ ಹಿತರಕ್ಷಣೆಯ ದೃಷ್ಟಿಯಿಂದ ಈ ಆಕ್ಷೇಪಗಳು ಸಮಂಜಸವಾಗಿರುತ್ತದೆ ಎಂದಿರುವ ಕೆಪಿಸಿಸಿ ವಕ್ತಾರರೂ ಆದ ರಮೇಶ್ ಬಾಬು, ರಾಜ್ಯ ಸರ್ಕಾರವು ಸಾರಿಗೆ ವ್ಯವಸ್ಥೆಯನ್ನು ವಿಸ್ತಾರಗೊಳಿಸುವ ಹಿನ್ನೆಲೆಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕವೂ ಒಳಗೊಂಡಂತೆ ಬೆಂಗಳೂರು ಮಹಾನಗರದ ಎಲ್ಲಾ ಭಾಗಗಳಲ್ಲಿ ಮೆಟ್ರೋ ವ್ಯವಸ್ಥೆಯನ್ನು ಜಾರಿಗೊಳಿಸಲಿ. ಸದ್ಯದ ಪರಿಸ್ಥಿತಿಯಲ್ಲಿ ಹೊಸೂರು-ಬೆಂಗಳೂರು ಮೆಟ್ರೋ ರೈಲು ಸಂಪರ್ಕದ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ಅನುಮತಿ ನೀಡಬಾರದೆಂದು ಸಲಹೆ ಮಾಡಿದ್ದಾರೆ.

Related posts