ಗುರು–ಶಿಷ್ಯ ಪರಂಪರೆಗೆ ನವಚೈತನ್ಯ ನೀಡಿದ SDPT REUNION

ಮಂಗಳೂರು: ‘ಗುರುಗಳನ್ನು ವಿದ್ಯಾರ್ಥಿಗಳು ಮತ್ತು ವೈದ್ಯರನ್ನು ರೋಗಿಗಳು ತಮ್ಮ ಕೆಲಸ ಮುಗಿದ ನಂತರ ಮರೆತುಬಿಡುತ್ತಾರೆ’ ಎಂಬುದು ಜನರಾಡಿಕೊಳ್ಳುತ್ತಿರುವ ಮಾತುಗಳು. ಆದರೆ, ‘ಬದುಕಿಗೆ ರೂಪಕೊಟ್ಟ ಗುರುಗಳೇ ಸರ್ವಸ್ವ’ ಎಂದು ಸಾರಿ ಹೇಳುವವರೂ ಇದ್ದಾರೆ. ಅದಕ್ಕೆ ಸಾಕ್ಷಿಯಾಗಿದ್ದೇ ಪುರಾಣ ಪ್ರಸಿದ್ಧ ಕಟೀಲು ದೇವಸ್ಥಾನದ ಅಧೀನದ SDPT ಕಾಲೇಜಿನ ಹಳೆಯ ವಿದ್ಯಾರ್ಥಿಗಳು.

ಈ ಕಾಲೇಜು ಸುಮಾರು 3 ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ವಿದ್ಯಾಸಂಸ್ಥೆ. ಆಗ ಕುಗ್ರಾಮದಂತಿದ್ದ ಕಟೀಲು ಸಮೀಪದ ಗುಡ್ಡ ಪ್ರದೇಶದಲ್ಲಿ ತಲೆ ಎತ್ತಿದ್ದ ಈ ಶ್ರೀ ದುರ್ಗಾಪರಮೇಶ್ವರಿ ಕಾಲೇಜು ಇದೀಗ ದೇಶಾದ್ಯಂತ ಹೆಸರುಗಳಿಸಿದೆ. ಗುಡ್ಡದಲ್ಲಿ ಕಾಲೇಜು ಆರಂಭದ ದಿನಗಳಲ್ಲಿ ‘ ಅಷ್ಟು ಎತ್ತರ ಹತ್ತುವವರು ಯಾರು?’ ಎಂದು ಪ್ರಶ್ನಿಸಿದ್ದವರೇ ಹೆಚ್ಚು ಮಂದಿ. ವಾಸ್ತವ ಏನೆಂದರೆ, ‘ಈ ಕಾಲೇಜಿನಲ್ಲಿ ಕಲಿತು ಎತ್ತರಕ್ಕೆ ಏರಿದವರೇ ಹೆಚ್ಚು ಮಂದಿ’ ಈ ಕಾಲೇಜಿನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಹತ್ತಾರು ದೇಶಗಳಲ್ಲಿ ಪ್ರತಿಷ್ಠಿತ ಹುದ್ದೆಗಳಲ್ಲಿದ್ದಾರೆ.

ದಶಕದ ಹಿಂದೆ, ಅಕ್ಷರ ದಾಸೋಹಕ್ಕೆ ಕಟೀಲು ದೇಗುಲದ ಅನ್ನ ದಾಸೋಹ ಸ್ಫೂರ್ತಿಯಾಗಿತ್ತು. ಅಕ್ಷರ-ಅನ್ನ ದಾಸೋಹ ಅಹರ್ನಿಶಿ ಎಂಬಂತೆ ಈಗಲೂ ಮುಂದುವರಿದಿದೆ. ಆ ಸತ್ಕಾರ್ಯ ಹೊಂದಿರುವ ಯಶಸ್ಸಿನ ಮುಖಗಳೇ ಆ ಕಾಲೇಜಿನ ಪ್ರಾಧ್ಯಾಪಕ ವೃಂದ ಎಂಬುದು ಸ್ಫಟಿಕ ಸತ್ಯ. ಈ ‘ಸಾಧಕ ಶಿಕ್ಷಕ’ರನ್ನು ಅಭಿನಂದಿಸಿ ಸತ್ಕರಿಸಿದ ಕೈಂಕರ್ಯವು ಇಡೀ ಸಮಾಜಕ್ಕೆ ಮಾದರಿ ಎಂಬಂತಿತ್ತು.

SDPT ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ನೂರಾರು ಮಂದಿ ಈಗ ಪ್ರತಿಷ್ಠಿತ ಹುದ್ದೆಗಳಲ್ಲಿ ಇದ್ದಾರೆ. ಹತ್ತಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳ ಚಾರ್ಟರ್ಡ್ ಅಕೌಂಟೆಂಟ್ ಬಳಗವನ್ನು ಮುನ್ನಡೆಸುವಲ್ಲಿ ಕಟೀಲು ಕಾಲೇಜಿನ ಹಳೇ ವಿದ್ಯಾರ್ಥಿಗಳೇ ಪ್ರಮುಖರಾಗಿದ್ದಾರೆ. ಈ ಎಲ್ಲಾ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆಸಿ ಕೂರಿಸುವ ಅನನ್ಯ ಚಿಂತನ-ಮಂಥನ ಕಾರ್ಯಕ್ರಮ ಕಟೀಲಿನಲ್ಲಿ ಭಾನುವಾರ (21.12.2025) ನಡೆಯಿತು.

ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಬೇರೆ ಬೇರೆ ದೇಶಗಳಲ್ಲಿನ ವ್ಯವಹಾರ ಚತುರರು, ಹತ್ತಾರು ಕ್ರಿಯಾಶೀಲರು ತಮ್ಮ ಸಾಧನೆ ಬಗ್ಗೆ ಬೆಳಕು ಚೆಲ್ಲಿದರು. ಸ್ವಂತ ಉದ್ದಿಮೆ ನಡೆಸುವವರು ಹೊಸ start-up ಆಸಕ್ತರಿಗೆ ಮಾರ್ಗದರ್ಶಿಯಾದರು. ವಿದ್ವಾಂಸರೂ, ವೈದಿಕ ಪಂಡಿತರೂ ತಮ್ಮ ಹಳೆಯ ಶಿಕ್ಷಕರನ್ನು ಕಂಡು ಮತ್ತೊಮ್ಮೆ ಶಿಕ್ಷಾರ್ಥಿಯಾದ ಅಪೂರ್ವ ಸನ್ನಿವೇಶಕ್ಕೂ ಇದು ಸಾಕ್ಷಿಯಾಯಿತು.

ಹಿರಿಯ ಪ್ರಾದ್ಯಾಪಕ ನಾಗೇಶ್ ರಾವ್ ಮಾತನಾಡಿ, ‘ಕಾಲ ಬದಲಾದಂತೆ ತಂತ್ರಜ್ಞಾನಗಳೂ ಅಭಿವೃದ್ಧಿಯಾಗುತ್ತವೆ. ಮುಂದಿನ ಪೀಳಿಗೆಯು ಬಹುತೇಕ AI ತಂತ್ರಜ್ಞಾನವನ್ನೇ ಅವಲಂಬಿಸಬೇಕಿರುವುದರಿಂದ, AI ಕಲಿಕೆಗೆ ಆದ್ಯತೆ ನೀಡಬೇಕು’ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡಿದರು.

ಹಿರಿಯ ಸಂಸ್ಕೃತ ಪ್ರಾದ್ಯಾಪಕ ಡಾ.ಸೋಂದ ಭಾಸ್ಕರ ಭಟ್ ಮಾತನಾಡಿ, ‘ಕೆಲಸದ ಒತ್ತಡದ ನಡುವೆ ಆದ್ಯಾತ್ಮಿಕ ಆಚರಣೆಗಳು ನಮ್ಮ ದೇಹ ಮತ್ತು ಮನಸ್ಸುಗಳಿಗೆ ಶಕ್ತಿ ತುಂಬುತ್ತದೆ. ಹಾಗಾಗಿ ಅಧ್ಯಾತ್ಮದತ್ತ ಒಲವು ಹೊಂದಬೇಕು’ ಎಂದು ತಿಳಿಹೇಳಿದರು.

ಪ್ರೊಫೆಸರ್ ಡಾ.ಕೃಷ್ಣ ಕಾಂಚನ್ ಮಾತನಾಡಿ, ‘ಲೆಕ್ಕ ಪರಿಶೋಧನೆಯು ಎಲ್ಲಾ ಕ್ಷೇತ್ರಗಳಿಗೂ ಮುಖ್ಯವಾದ ಅಂಗವಾಗಿದೆ. ಅದರಲ್ಲೂ SDPT ಶಿಕ್ಷಣ ಸಂಸ್ಥೆಯಲ್ಲಿ ಕಲಿತ ನೂರಾರು ಮಂದಿ ಕ್ಷೇತ್ರದಲ್ಲಿ ಪರಿಣಿತರಾಗಿರುವುದು ಹೆಮ್ಮೆಯ ಸಂಗತಿ’ ಎಂದರು.

ಪ್ರೊಫೆಸರ್ ಕೇಶವ ಹೆಚ್ ಮಾತನಾಡಿ, ‘ಸಮಾಜಕ್ಕೆ ನಾವು ನೀಡುವ ಕೊಡುಗೆ ಬೇರೊಂದು ರೂಪದಲ್ಲಿ ನಮಗೆ ಸಿಗುತ್ತದೆ. ಹಾಗಾಗಿ ಸೇವೆಯಲ್ಲೂ ಸಮರ್ಪಣಾ ಭಾವವನ್ನು ರೂಢಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಪ್ರೊಫೆಸರ್ ಡಾ.ವಿಜಯ ಕುಮಾರ್, ಮಾತನಾಡಿ ಗುರು-ಶಿಷ್ಯ ಸಂಬಂಧವು ರಕ್ತಗತ ಗುಣವಾಗಿದೆ. ಅದರಂತೆ ಪ್ರತೀ ವಿದ್ಯಾಸಂಸ್ಥೆಗಳಲ್ಲೂ ವಿದ್ಯಾರ್ಥಿ-ಪ್ರಾಧ್ಯಾಪಕರ ಸಮ್ಮಿಲನ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಅದು ಸಾಮಾಜಿಕ ಸಾಮರಸತೆಗೆ ವೇದಿಕೆ ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣಶೆಟ್ಟಿ ಮಾತನಾಡಿ, ಗುರುಗಳನ್ನು ನೆನಪಿಸುವ ಕೈಂಕರ್ಯವು ಶಿಕ್ಷಣಸಂಸ್ಥೆಗೆ ಆಧಾರವಾಗಿರುತ್ತದೆ ಎಂದರು.

ಪ್ರೊಫೆಸರ್ ಜಗದೀಶ್ ಚಂದ್ರ ಮಾತನಾಡಿ, ನಾವು ಕಲಿತ ಶಿಕ್ಷಣವು ಇತರರ ಬದುಕಿಗೂ ಮಾರ್ಗದರ್ಶನದಂತಿರಬೇಕು. ಅದೇ ರೀತಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗೆ ಆಧಾರವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಶಾರೀರಿಕ ನಿರ್ದೇಶಕರಾಗಿದ್ದ ಜಯರಾಂ ಶೆಟ್ಟಿ, ಮಾತನಾಡಿ ದೈಹಿಕ ಶಿಕ್ಷಣವು ಶಾಲಾ ಕಾಲೇಜುಗಳಲ್ಲಷ್ಟೇ ಅಲ್ಲ, ನಿತ್ಯದ ಬದುಕಿನಲ್ಲಿ ಆದ್ಯ ಚಟುವಟಿಕೆಗಳಾಗಬೇಕು. ಅದು ಬದುಕಿನ ಭಾಗವಾದಲ್ಲಿ ಮನುಷ್ಯ ಆರೋಗ್ಯವಾಗಿರಲು ಸಾಧ್ಯ ಎಂದರು.

Related posts