ಪಂಚಾಯಿತಿ ನೌಕರರಿಗೆ ಭವಿಷ್ಯ ನಿಧಿ ಸೌಲಭ್ಯ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಸೌಲಭ್ಯವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಕುರಿತು ಮಹತ್ವದ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 30 ಗ್ರಾಪಂಸಿ 2008, ದಿನಾಂಕ 31-10-2008ರ ಪ್ರಕಾರ, ರಾಜ್ಯದಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ಸೌಲಭ್ಯವನ್ನು 01-11-2008ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಆದರೆ ಈ ಆದೇಶದ ಅನುಷ್ಠಾನವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾನವಾಗಿ ನಡೆದಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ.

ಉಡುಪಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿದ್ದು, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾಗಶಃ ಅನುಷ್ಠಾನಗೊಂಡಿರುವುದು ಕಂಡುಬಂದಿದೆ. ಇನ್ನು ರಾಜ್ಯದ ಉಳಿದ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಈ ಸೌಲಭ್ಯವನ್ನು ಇನ್ನೂ ಜಾರಿಗೊಳಿಸಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ, ಅರ್ಹತೆ ಹೊಂದಿರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸುವಂತೆ ಸರ್ಕಾರ ಸೂಚನೆ ನೀಡಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಂಡು, ಆಯುಕ್ತಾಲಯಕ್ಕೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ.

ಅಲ್ಲದೆ, ಭವಿಷ್ಯ ನಿಧಿ ಯೋಜನೆಯ ಅನುಷ್ಠಾನವನ್ನು ಜಿಲ್ಲಾ ಪಂಚಾಯಿತಿ ಹಂತದಲ್ಲಿ ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸುವಂತೆ ಸರ್ಕಾರ ಆದೇಶಿಸಿದೆ.

Related posts