ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಬಿಜೆಪಿ ಸಮರ; ಸಿಎಂ ತವರಿನಿಂದ ಅಭಿಯಾನ

ಬೆಂಗಳೂರು: ಯುವಜನತೆಯ ಭವಿಷ್ಯ ಹಾಳು ಮಾಡುತ್ತಿರುವ ಡ್ರಗ್ಸ್‌ ಮಾಫಿಯಾ ತಡೆಗಟ್ಟಲು ಬಿಜೆಪಿಯು ಬೃಹತ್ ಜಾಗೃತಿ ಹೋರಾಟವನ್ನು ಸಿಎಂ ತವರು ಜಿಲ್ಲೆ ಮೈಸೂರಿನಿಂದ ಆರಂಭಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ.

ಗಂಧದ ನಾಡು ಎಂದು ಖ್ಯಾತಿ ಹೊಂದಿದ್ದ ಕರುನಾಡು ಕಾಂಗ್ರೆಸ್ ಆಡಳಿತದಲ್ಲಿ ಡ್ರಗ್ಸ್ ಬೀಡಾಗಿದೆ. ನೆರೆ ರಾಜ್ಯದ ಪೊಲೀಸರು ಕರ್ನಾಟಕ ರಾಜ್ಯಕ್ಕೆ ಬಂದು ಡ್ರಗ್ಸ್‌ ಫ್ಯಾಕ್ಟರಿ ಮೇಲೆ ದಾಳಿ ಮಾಡುವ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದೆ. ಡ್ರಗ್ಸ್ ಮಾಫಿಯಾ ಜೊತೆಗೆ ಸಚಿವರ ಆಪ್ತರ ನಂಟು ಬೆಳಕಿಗೆ ಬಂದಿದೆ ಎಂದವರು ಆರೋಪಿಸಿದ್ದಾರೆ.

ಸಮಾಜಘಾತುಕರನ್ನು ಹಾಗೂ ಅಪರಾಧಿಗಳನ್ನು ಪೋಷಿಸುವ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಖರಿಯಿಂದ ಇಂದು ರಾಜ್ಯದ ಮೂಲೆ ಮೂಲೆಗೂ ಡ್ರಗ್ಸ್ ಘಾಟು ಹಬ್ಬಿದೆ ಎಂದು ವಿಜಯೇಂದ್ರ ವ್ಯಾಖ್ಯಾನಿಸಿದ್ದಾರೆ.

ಡ್ರಗ್ಸ್‌ ದಂಧೆಯನ್ನು ಮಟ್ಟ ಹಾಕಿ, ಯುವಜನತೆಯನ್ನು ಇವುಗಳಿಂದ ರಕ್ಷಿಸಲು ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ, ಜವಾಬ್ದಾರಿಯುತ ಪ್ರತಿಪಕ್ಷವಾಗಿ, ರಾಜ್ಯದ ಜನತೆಯ ಧ್ವನಿಯಾಗಿ ಬಿಜೆಪಿಯು ಡ್ರಗ್ಸ್ ದಂಧೆ ವಿರುದ್ಧ ರಾಜ್ಯದಾದ್ಯಂತ ಸಮರ ಸಾರಲಿದೆ ಎಂದವರು ತಿಳಿಸಿದ್ದಾರೆ.

Related posts