ಜಂತರ್ ಮಂತರ್ ಸಂಘರ್ಷ: ದೂರು ಸ್ವೀಕಾರಕ್ಕೆ ಸುಪ್ರೀಂ ಕೋರ್ಟ್ ಸಮಿತಿಯಿಂದ ಪೋರ್ಟಲ್ ಆರಂಭ

ನವದೆಹಲಿ: 2026ರ ಜುಲೈನಲ್ಲಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆದ ಹಿಂಸಾಚಾರದ ಘಟನೆಗಳ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ತನಿಖಾ ಸಮಿತಿ (HPEC), ಸಂತ್ರಸ್ತರು, ಪೊಲೀಸ್ ಸಿಬ್ಬಂದಿ ಹಾಗೂ ಇತರ ಸಂಬಂಧಪಟ್ಟವರಿಂದ ದೂರು ಮತ್ತು ಮನವಿಗಳನ್ನು ಸ್ವೀಕರಿಸಲು ಪ್ರತ್ಯೇಕ ಪೋರ್ಟಲ್ ಆರಂಭಿಸಿದೆ.

ಸಂತ್ರಸ್ತರು ಹಾಗೂ ಇತರ ಪಾಲುದಾರರು ದೂರುಗಳು ಮತ್ತು ಸಂಬಂಧಿತ ಮಾಹಿತಿಯನ್ನು ಸಲ್ಲಿಸಲು http://hpec.nic.in ಪೋರ್ಟಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೋ ತಿಳಿಸಿದೆ.

ಸುಪ್ರೀಂ ಕೋರ್ಟ್ 2026ರ ಆಗಸ್ಟ್ 18 ಮತ್ತು ಸೆಪ್ಟೆಂಬರ್ 10ರಂದು ನೀಡಿದ ಆದೇಶಗಳಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಸಮಿತಿ ಪರಿಶೀಲಿಸಲಿದೆ. ಪೆಲೆಟ್ ಗನ್‌ಗಳ ಬಳಕೆ, ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರ, ಮಹಿಳಾ ಪ್ರತಿಭಟನಾಕಾರರಿಗೆ ಕಿರುಕುಳ ಹಾಗೂ ಎರಡೂ ಕಡೆಯಿಂದ ನಡೆದ ಅತಿಯಾದ ಹಿಂಸಾಚಾರ ಮತ್ತು ಆಸ್ತಿಪಾಸ್ತಿ ನಾಶಕ್ಕೆ ಸಂಬಂಧಿಸಿದ ದೂರುಗಳಿಗೆ ಆದ್ಯತೆ ನೀಡಲಾಗುತ್ತದೆ.

ಗುರುತು ಗೌಪ್ಯವಾಗಿಡಲು ಅವಕಾಶ

ದುರ್ಬಲ ಸಾಕ್ಷಿಗಳ ರಕ್ಷಣೆ ಮತ್ತು ಗೌಪ್ಯತೆ ಕಾಪಾಡುವ ಉದ್ದೇಶದಿಂದ ಪೋರ್ಟಲ್ ರೂಪಿಸಲಾಗಿದೆ. ಸಂತ್ರಸ್ತರು ದೂರು ಅಥವಾ ಮನವಿ ಸಲ್ಲಿಸುವಾಗ ತಮ್ಮ ಗುರುತನ್ನು ಗೌಪ್ಯವಾಗಿಡುವ ಆಯ್ಕೆಯನ್ನೂ ಬಳಸಬಹುದು.

ಸುಪ್ರೀಂ ಕೋರ್ಟ್ ಆದೇಶಗಳ ವ್ಯಾಪ್ತಿಗೆ ಒಳಪಡುವ ಘಟನೆಗಳಿಗೆ ಸಂಬಂಧಿಸಿದ ಮಾಹಿತಿ, ದೂರುಗಳು, ಸಲಹೆಗಳು ಹಾಗೂ ಪೂರಕ ದಾಖಲೆಗಳನ್ನು ನಿಗದಿತ ನಮೂನೆಗಳ ಮೂಲಕ ಪೋರ್ಟಲ್‌ನಲ್ಲಿ ಸಲ್ಲಿಸುವಂತೆ ಸಮಿತಿ ಕೋರಿದೆ.

ಅಂಚೆ, ಇ-ಮೇಲ್ ಮೂಲಕವೂ ದೂರು ಸಲ್ಲಿಕೆ

ದೂರುಗಳು ಮತ್ತು ದಾಖಲೆಗಳನ್ನು ಖುದ್ದಾಗಿ ಸಲ್ಲಿಸಲು ಬಯಸುವವರು ಕೆಲಸದ ದಿನಗಳಲ್ಲಿ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನವದೆಹಲಿಯ ಶಿಕ್ಷಣ ಸದನ್, 17, ರೌಸ್ ಅವೆನ್ಯೂ ಇನ್‌ಸ್ಟಿಟ್ಯೂಷನಲ್ ಏರಿಯಾ, ನವದೆಹಲಿ–110002ರಲ್ಲಿರುವ HPEC ಕಚೇರಿಗೆ ಭೇಟಿ ನೀಡಬಹುದು.

ಅಲ್ಲದೆ, ಇದೇ ವಿಳಾಸಕ್ಕೆ ಅಂಚೆ ಮೂಲಕ ಅಥವಾ hpec2026.enquiry@nic.in ಇ-ಮೇಲ್ ವಿಳಾಸಕ್ಕೆ ದೂರುಗಳು, ಮನವಿಗಳು ಮತ್ತು ಸಂಬಂಧಿತ ಮಾಹಿತಿಯನ್ನು ಕಳುಹಿಸಬಹುದಾಗಿದೆ

Related posts