ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದ್ದರೆ, ಇತ್ತ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈ ವೈರಾಣು ಆತಂಕದ ಅಲೆ ಎಬ್ಬಿಸಿದೆ. ಇದಕ್ಕೆ ಜುಬಿಲೆಂಟ್ ಫಾರ್ಮಾ ಕಂಪನಿ ಹೊಣೆ ಎಂಬ ಆಕ್ರೋಶದ ಮಾತುಗಳೂ ಕೇಳಿಬರುತ್ತಿವೆ.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಜುಬಿಲೆಂಟ್ ಫಾರ್ಮಾ ಕಂಪನಿಯ ನೌಕರರಿಗೆ ಕೋವಿಡ್-19 ಸೋಂಕು ಹರಡಿದ ವೈಖರಿ ಒಂದು ಆತಂಕಕಾರಿ ಬೆಳವಣಿಗೆ. ಈ ಕಂಪೆನಿಯ ಅನೇಕ ನೌಕರರು ಕೊರೋನಾ ಸೋಂಕಿನಿಂದಾಗಿ ಬಳಲಿದ್ದು, ಈ ಪ್ರಕರಣ ಬಗ್ಗೆ ಅನೇಕಾನೇಕ ಸಂಶಯಗಳು ಮೂಡಲಾರಂಭಿಸಿದೆ. ಈ ಕುರಿತಂತೆ ಸೂಕ್ತ ತನಿಖೆಯ ಅಗತ್ಯದ ಬಗ್ಗೆ ಸಲಹೆಗಳು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಯನ್ನು ತನಿಖೆಗಾಗಿ ನೇಮಿಸಿದೆ.
ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅವರನ್ನು ನೇಮಕ ಮಾಡಿರುವ ಸರ್ಕಾರ ನಂಜನಗೂಡಿನಲ್ಲಿ ಈ ಸೋಂಕು ಹರಡಲು ಮೂಲ ಕಾರಣ ಏನು ಎಂಬ ಬಗ್ಗೆ ಅಧ್ಯಯನ ನಡೆಸಲು ಸೂಚಿಸಿದೆ.
ಮೈಸೂರು ಜಿಲ್ಲೆ ಕೊರೋನಾ ಹಾಟ್ಸ್ಪಾಟ್ ಆಗಲು ನಂಜನಗೂಡು ಜುಬಿಲೆಂಟ್ ಫಾರ್ಮಾ ಕಂಪನಿಯೇ ಮುಖ್ಯ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದು, ಎಲ್ಲಾ ರೀತಿಯ ಅನುಮಾನಗಳಿಗೆ ಈ ತನಿಖೆ ಉತ್ತರ ನೀಡುವ ನಿರೀಕ್ಷೆಯಿದೆ.