ಬೆಂಗಳೂರು: ಕೊರೋನಾ ಕಾರಣಕ್ಕಾಗಿ ದೇಶದೆಲ್ಲೆಡೆ ಲಾಕ್’ಡೌನ್ ಜಾರಿಯಲ್ಲಿದೆ. ಈ ಕ್ರಮದಿಂದಾಗಿ ದೇಶದ ವಿವಿಧ ರಾಜ್ಯಗಳ ಜನರು ಬೇರೆ ಬೇರೆ ಕಡೆ ಸಿಲುಕಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೂ ಕೆಲಸಕ್ಕಾಗಿ ಬಂದಿರುವ ಉತ್ತರಭಾರತದ ಸಾವಿರಾರು ಮಂದಿ ಇತ್ತ ಕೆಲಸವೂ ಇಲ್ಲದೆ, ಅತ್ತ ಊರಿಗೂ ಹೋಗಲಾರದೆ ಸಂದಿಗ್ಧತೆಯಲ್ಲಿದ್ದಾರೆ.
ಈ ನಡುವೆ ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದ ಬಿಹಾರ ಹಾಗೂ ಒಡಿಶಾ ರಾಜ್ಯಗಳ ಸಾವಿರಾರು ಮಂದಿಯನ್ನು ಅವರ ರಾಜ್ಯಗಳಿಗೆ ಕಳುಹಿಸುವ ಪ್ರಯತ್ನ ನಡೆದಿದೆ. ಈ ಪೈಕಿ 1 ಸಾವಿರಕ್ಕೂ ಹೆಚ್ಚು ಒಡಿಶಾದ ಕಾರ್ಮಿಕರನ್ನು ವಿಶೇಷ ರೈಲಿನ ಮೂಲಕ ವಾಪಾಸ್ ಕಳುಹಿಸಲಾಗಿತ್ತು. ಅದೇರೀತಿ ತಮಗೂ ಯಾಕೆ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಹಾರ ಮೂಲದ ಕಾರ್ಮಿಕರು ಬೆಂಗಳೂರು ಹೊರವಲಯದಲ್ಲಿ ಪ್ರತಿಭಟನೆಗಿಳಿದಿದ್ದರು. ಏಕಾಏಕಿ ನಡೆದ ಈ ಪ್ರತಿಭಟನೆ ಕಾನೂನು ಸುವ್ಯವಸ್ಥೆಗೂ ಸವಾಲೆಂಬಂತಾಯಿತು. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಯುತ್ತಿದ್ದ ವೇಳೆ ಉದ್ರಿಕರು ಪೋಲಿಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ವೇಳೆ ಪೀಣ್ಯ ಇನ್ಸ್ಪೆಕ್ಟರ್ ಮುದ್ದುರಾಜ್ ತಲೆಗೆ ಕಲ್ಲೇಟು ತಗುಲಿ ಅವರು ಗಾಯಗೊಂಡರು.
ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಛೆತ್ತುಕೊಂಡ ಮಾದನಾಯಕನಹಳ್ಳಿ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಸತ್ಯನಾರಾಯಣ ಏಕಾಏಕಿ ರಾಷ್ಟ್ರಗೀತೆ ಹಾಡಿದರು. ರಾಷ್ಟ್ರಗೀತೆ ಕೇಳುತ್ತಿದ್ದಂತೆಯೇ ಉದ್ರಿಕ್ತ ಗುಂಪೂ ಶಾಂತವಾಯಿತು. ಹಲವರ ಕೈಗಳಲ್ಲಿದ್ದ ಕಲ್ಲುಗಳೂ ಜಾರಿ ಬಿದ್ದವು. ಅಷ್ಟೇ ಅಲ್ಲ ಆಕ್ರೋಶವೂ ತಣ್ಣಗಾಗಿ ಕೆಲವೇ ನಿಮಿಷಗಳಲ್ಲಿ ಬಿಹಾರಿ ಯುವಕರ ಆಕ್ರೋಶವೂ ತಣ್ಣಗಾದದ್ದು ವಿಶೇಷ.
ಮೂರು ದಿನಗಳ ಹಿಂದೆ ನಡೆದ ಈ ಸನ್ನಿವೇಶದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ರಾಷ್ಟ್ರಗೀತೆ ಹಾಡಿದ ಇನ್ಸ್ಪೆಕ್ಟರ್ ಸತ್ಯನಾರಾಯಣ ಈಗ ಹೀರೋ ಆಗಿಬಿಟ್ಟಿದ್ದಾರೆ. ಈ ಅಧಿಕಾರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಇದನ್ನೂ ಓದಿ.. ಮದ್ಯಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್