ರಾಜ್ಯದ ಖಜಾನೆಗೆ ಹಣದ ಹೊಳೆ; ಮದ್ಯ ಮಾರಾಟದಿಂದ ಬಂಡ ಆದಾಯ ಎಷ್ಟು ಗೊತ್ತಾ? ಬರೋಬ್ಬರಿ ಸಾವಿರ ಕೋಟಿ
–
ಕೋಲಾರ: ಲಾಕ್ ಡೌನ್ ನಡುವೆಯೂ ರಾಜ್ಯದಲ್ಲಿ ಮದ್ಯದ ಹೊಳೆಯೇ ಹರಿದಿದ್ದು ರಾಜ್ಯಸರ್ಕಾರದ ಬೊಕ್ಕಸಕ್ಕೂ ಭಾರೀ ಮೊತ್ತದ ಆದಾಯ ಸೇರಿದೆ. ಪರ ವಿರೋಧದ ನಡುವೆಯೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದೆ ತಡ ರಾಜ್ಯ ಸರ್ಕಾರದ ಬೊಕ್ಕಸ ಶ್ರೀಮಂತಿಕೆಯಿಂದ ನಳನಳಿಸುತ್ತಿದೆ. ಈ ವಿಚಾರವನ್ನು ಸ್ವತಹ ಅಬಕಾರಿ ಸಚಿವರೇ ಹೇಳಿಕೊಂಡಿದ್ದಾರೆ.
ಲಾಕ್’ಡೌನ್ ಸಡಿಲಿಕೆ ನಂತರ ಒಂದು ವಾರದ ಮದ್ಯ ವಹಿವಾಟಿನಲ್ಲಿ ಸುಮಾರು 1000 ಕೋಟಿ ರೂಪಾಯಿ ಆದಾಯ ಕ್ರೋಡೀಕರಣವಾಗಿದೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ತಿಳಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರಿಗೆ ಈ ಕುರಿತು ವಿವರ ಒದಗಿಸಿದ ಅಬಕಾರಿ ಸಚಿವ ನಾಗೇಶ್, ಲಾಕ್’ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು 42 ದಿನಗಳ ಕಾಲ ಮದ್ಯ ವಹಿವಾಟು ಸ್ತಬ್ಧಗೊಂಡಿತ್ತು. ಈ ಅವಧಿಯಲ್ಲಿ ಸುಮಾರು 3 ಸಾವಿರ ಕೋಟಿ ರೂಪಾಯಿ ಆದಾಯ ದೂರವಾಗಿತ್ತು. ಇದೀಗ ಒಂದು ವಾರದ ವಹಿವಾಟಿನಲ್ಲೇ ಸುಮಾರು 1000 ಕೋಟಿ ರೂಪಾಯಿ ವರದಾನವಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿಗೆ 22,500 ಕೋಟಿ ರೂ ಗುರಿಯಿದ್ದು ಶೇ. 17 ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದ 2500 ಕೋಟಿ ರೂ ಹೆಚ್ಚುವರಿ ಆದಾಯ ಸಿಗಲಿದ್ದು ಒಟ್ಟು 25000 ಗುರಿ ಹೊಂದಿದಂತಾಗಿದೆ ಎಂದರು.
ಇದೇ ವೇಳೆ ಕರ್ನಾಟಕದಲ್ಲಿ ಮಾತ್ರ ಮದ್ಯ ಮಾರಾಟವಾಗುತ್ತಿದ್ದು ನೆರೆ ರಾಜ್ಯಗಳ ಜನ ಗಡಿ ಭಾಗದಲ್ಲಿ ಮದ್ಯ ಖರೀದಿಗಾಗಿ ಅಕ್ರಮವಾಗಿ ನುಸುಳುವ ಸಾಧ್ತತೆಗಳಿವೆ. ಹಾಗಾಗಿ ಎಚ್ಚರದಿಂದಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದರು.