ಬೆಂಗಳೂರು: ಭುರ್ಖಾಧಾರಿ ಮಹಿಳೆ.. ಆಕೆಯನ್ನು ಸುತ್ತುವರಿಯುವ ಯುವಕರು.. ಆ ಯುವಕರು ಅದೇನೋ ಒತ್ತಡ ಹೇರುತ್ತಿರುವ ಪ್ರಸಂಗ.. ಅವರಲ್ಲಂತೂ ಒಬ್ಬಾತ ಏರು ಧ್ವನಿಯಲ್ಲಿ ಧಮ್ಕಿ ಹಾಕಿದ ವೈಖರಿ.. ಕೆಲವರಂತೂ ಆ ಮಹಿಳೆ ಕೈಯ್ಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಳ್ಳೋದು..
ಒಂದು ರೀತಿ ಗೊಂದಲದ ಸನ್ನಿವೇಶ ಅದಾಗಿದೆ. ಈ ದೃಶ್ಯದ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೊರೋನಾ ವಿಚಾರದಲ್ಲಿ ತಬ್ಲಿಘಿಗಳ ಕುರಿತು ಶೋಭಾ ಕರಾಂದ್ಲಾಜೆಯವರು ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಸ್ಲಿಂ ಮಹಿಳೆಗೆ ಅದೇ ಸಮುದಾಯದ ಯುವಕರು ನೀಡಿರುವ ಕಿರುಕುಳದ ಸನ್ನಿವೇಶದತ್ತ ಇವರು ಶೋಭಾ ಕರಾಂದ್ಲಾಜೆಯವರು ಬೆಳಕು ಚೆಲ್ಲಿದ್ದಾರೆ.
ದಾವಣಗೆರೆಯಲ್ಲಿ ಮತಾಂಧರು ಹಿಂದೂಗಳ ಜವಳಿ ಅಂಗಡಿಯಲ್ಲಿ ಬಟ್ಟೆಬರೆ ಖರೀದಿ ಮಾಡದಂತೆ ಮುಸ್ಲಿಂ ಮಹಿಳೆಯರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ. ಷರಿಯಾ ಕಾನೂನಿಗೆ ಪ್ರತಿಯಾಗಿ ಪ್ರಜಾಪ್ರಭುತ್ವ ಭಾರತದ ಕಾನೂನಿನ ರುಚಿ ತೋರಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿ ಗಮನಸೆಳೆದಿದ್ದಾರೆ.
https://twitter.com/i/status/1262035068890918912
ಜೊತೆಗೆ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠರಿಗೂ ಟ್ಯಾಗ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.