ಹೈದರಾಬಾದ್: ತಿರುಪತಿ ತಿಮ್ಮಪ್ಪ ಹಿಂದೂಗಳ ಆರಾಧ್ಯ ದೈವ. ಈ ಶ್ರೀನಿವಾಸನ ಸನ್ನಿಧಿಯೇ ಜಗತ್ತಿನ ಶ್ರೀಮಂತ ದೇಗುಲಗಳಲ್ಲೊಂದು. ಸಾಮಾನ್ಯವಾಗಿ ದೇವಾಲಯಗಳಿಗೆ ಸಾವಿರ ಸೀಮೆಯನ್ನು ಗುರುತಿಸಲಾಗುತ್ತದೆ. ಆದರೆ ತಿಮ್ಮಪ್ಪನ ಈ ದೇವಾಲಯ ಇಡೀ ವಿಶ್ವದ ಜನರನ್ನು ಭಕ್ತರನ್ನಾಗಿಸಿದೆ.
ಪ್ರಸ್ತುತ ಲಾಕ್’ಡೌನ್ ಜಾರಿಯಲ್ಲಿದ್ದರೂ ತಿಮ್ಮಪ್ಪನ ಮಹಿಮೆ ಜಗದಗಲಕ್ಕೆ ಚಾಚಿದ್ದು ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಈ ಪರಿಸ್ಥಿತಿಯಲ್ಲೂ ಏಪ್ರಿಲ್ ತಿಂಗಳಲ್ಲಿ 1.97 ಕೋಟಿ ರೂಪಾಯಿ ಕಾಣಿಕೆ ಬಂದಿದೆ. ತಿಮ್ಮಪ್ಪನ ಇ- ಹುಂಡಿಗೆ ಈ ಹಣ ಹರಿದುಬಂದಿದ್ದು ಕಳೆದ ವರ್ಷದ ಎಪ್ರಿಲ್’ನಲ್ಲಿ ಬಂದ ಕಾಣಿಕೆಗಿಂತ ಈ ವರ್ಷ ಲಾಕ್’ಡೌನ್ ಇದ್ದರೂ ಹಿಂದಿಗಿಂತ ಹೆಚ್ಚು ಕಾಣಿಕೆ ಬಂದಿದೆ.
ಈವರೆಗೂ ದೇಗುಲದ ಸಿಬ್ಬಂದಿಗೆ ವೇತನ ಪಾವತಿ ಬಗ್ಗೆ ಆಡಳಿತ ಮಂಡಳಿ ಅಸಹಾಯಕತೆ ವ್ಯಕ್ತಪಡಿಸುತ್ತಿತ್ತು. ಅದಾಗಲೇ ಇ-ಕಾಣಿಕೆಯ ಮೊತ್ತ ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ ತಿರುಪತಿ ಲಡ್ಡು ಪ್ರಸಾದವನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ಮಾಡಲು ದೇವಾಲಯ ನಿರ್ಧರಿಸಿದೆ.
ಲಾಕ್ಡೌನ್ ಕಾರಣದಿಂದಾಗಿ ದೇಗುಲ ಮುಚ್ಚಿದ್ದರಿಂದ ಭಕ್ತರಿಗೆ ತಿಮ್ಮಪ್ಪನ ದರ್ಶನ ಅವಕಾಶ ಸಿಕ್ಕಿಲ್ಲ. ಈಗಿನ್ನೂ ಪರಿಸ್ಥಿತಿ ಸುಧಾರಿಸಿಲ್ಲ. ಹಾಗಾಗಿ ಭಕ್ತ ಸಮೂಹಕ್ಕೆ ಲಡ್ಡು ತಲುಪಿಸುವ ಪ್ರಯತ್ನ ನಡೆದಿದೆ. ತಿರುಪತಿ ತಿರುಮಲ ದೇವಸ್ಥಾನಂ ಶೇ.50 ರಿಯಾಯಿತಿ ದರದಲ್ಲಿ ಲಡ್ಡು ಪ್ರಸಾದ ವಿತರಿಸಲು ತೀರ್ಮಾನಿಸಿದೆ. 175 ಗ್ರಾಂ ಲಡ್ಡನ್ನು 50 ರೂ. ಬದಲು 25 ರೂ.ಗೆ ನೀಡಲಾಗುತ್ತದೆಯಂತೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸುತ್ತಮುತ್ತಲಿನ ಟಿಟಿಡಿ ಮಾಹಿತಿ ಕೇಂದ್ರಗಳಲ್ಲಿ ಲಡ್ಡುಗಳು ಮಾರಾಟಕ್ಕೆ ಲಭ್ಯವಾಗಲಿವೆ ಎಂದು ಟಿಟಿಡಿ ಅಧ್ಯಕ್ಷ ಸುಬ್ಟಾರೆಡ್ಡಿ ತಿಳಿಸಿದ್ದಾರೆ.