ಬೆಂಗಳೂರು: ಒಂದೆಡೆ ಕೊರೋನಾ ಅಬ್ಬರ.. ಇನ್ನೊಂದೆಡೆ ಬಿರು ಬೇಸಿಗೆಯ ಧಗೆ.. ಅದರಲ್ಲೂ ಕಳೆದ ಸೀಸನ್’ನಲ್ಲಿ ಬೆಳೆದಿರುವ ಬೆಳೆ ಲಾಕ್’ಡೌನ್ ಪರಿಣಾಮದಿಂದಾಗಿ ಹಾಳಾಗಿದೆ. ಈ ಪರಿಸ್ಥಿತಿಯಿಂದ ನೊಂದಿದ್ದರೂ ಮುಂಬರುವ ಸೀಸನ್ ಬಗ್ಗೆ ರೈತರು ಮರೆಯಬಾರದು. ಈ ವಿಚಾರದಲ್ಲಿ ರೈತರಿಗೆ ನೆರವಾಗಲು ಸರ್ಕಾರ ಕೂಡಾ ಸನ್ನದ್ಧವಾಗಿದೆ.
ಮುಂಗಾರು ಬಿತ್ತನೆಗೆ ಕೃಷಿ ಕ್ಷೇತ್ರ ಸಜ್ಜಾಗಿದ್ದು, ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಇದೆ. ಯಾವುದೇ ಕಾರಣಕ್ಕೂ ರೈತರಿಗೆ ಇವುಗಳ ಕೊರತೆಯಾಗದಂತೆ ಸರ್ಕಾರ ಕ್ರಮವಹಿಸಿದ್ದು ರೈತರು ಮಳೆಗೂ ಮುನ್ನವೇ ಅಗತ್ಯವಾದ ಬಿತ್ತನೆ ಬೀಜ,ಗೊಬ್ಬರ ಖರೀದಿಸಿ ದಾಸ್ತಾನು ಮಾಡಿಕೊಳ್ಳುವುದು ಒಳ್ಳೆಯದು.
ಇದು ಕೃಷಿ ಪಂಡಿತರ ಸಲಹೆಯಾದರೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡಾ ರೈತರಿಗೆ ಖುಷಿ ತರುವ ಹೇಳಿಕೆ ನೀಡಿದ್ದಾರೆ. ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಏಪ್ರಿಲ್ ಅಂತ್ಯದಿಂದ ಮೇ ಮೊದಲ ವಾರದಲ್ಲಿ ಬಿತ್ತನೆಗೆ ಬೇಕಾದ ಸೋಯಾಬಿನ್ ಬೀಜವನ್ನು ಮಧ್ಯಪ್ರದೇಶದಿಂದ ಆಮದುಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯದ ಕೃಷಿ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. 1.5ಲಕ್ಷ ಟನ್ ಸೋಯಾಬೇಡಿಕೆ ಇದ್ದು, 1.5 ಸಾವಿರ ಟನ್ ಈಗಾಗಲೇ ಬಂದಿದ್ದು, ಏಪ್ರಿಲ್ 30ರೊಳಗೆ ಅಗತ್ಯ ಬೇಡಿಕೆ ಪೂರೈಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಮೆಕ್ಕೆಜೋಳ ಖರೀದಿ ಸಂಬಂಧ ಕೇಂದ್ರಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪರಿಸ್ಥಿತಿ ನೋಡಿಕೊಂಡು ಕೇಂದ್ರ ಸರ್ಕಾರ ಸಮರ್ಪಕ ಕ್ರಮ ಜರುಗಿಸಲಿದೆ ಎಂದು ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.