ವಿಜಯಪುರ: ಜಾತಿ ಜನಗಣತಿ ವರದಿಯ ವಿಷಯದಲ್ಲಿ ಲಿಂಗಾಯತ ಸಮುದಾಯದ ಎಲ್ಲಾ ಏಳು ಮಂತ್ರಿಗಳು ಒಗ್ಗಟ್ಟಿನಿಂದ ಇದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ್, ‘ಲಿಂಗಾಯತ ಸಮುದಾಯದ ಎಲ್ಲಾ ಏಳು ಮಂತ್ರಿಗಳು – ಈಶ್ವರ್ ಖಂಡ್ರೆ, ಶರಣ್ ಪ್ರಕಾಶ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪುರ, ಶಿವಾನಂದ್ ಪಾಟೀಲ್, ಎಚ್.ಕೆ. ಪಾಟೀಲ್ ಮತ್ತು ನಾನು – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದೇವೆ. ನಂತರ ಏಪ್ರಿಲ್ 17 ರಂದು ಜಾತಿ ಜನಗಣತಿ ವರದಿಯ ಕುರಿತು ಚರ್ಚಿಸಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದೆವು’ ಎಂದು ತಿಳಿಸಿದರು.
‘ನಾವು ಮತ್ತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಜಾತಿ ಜನಗಣತಿಗೆ ಸಂಬಂಧಿಸಿದಂತೆ ನಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಒಗ್ಗಟ್ಟಾಗಿದ್ದೇವೆ’ ಎಂದು ಅವರು ಪುನರುಚ್ಚರಿಸಿದರು.
ತಮ್ಮ ಮತ್ತು ಸಚಿವರಾದ ಶಿವಾನಂದ್ ಪಾಟೀಲ್ ಮತ್ತು ಈಶ್ವರ್ ಖಂಡ್ರೆ ನಡುವೆ ವಾಗ್ವಾದ ನಡೆದಿದೆ ಎಂಬ ಮಾಧ್ಯಮ ವರದಿಗಳ ಕುರಿತು ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, ವಿಶೇಷ ಸಚಿವ ಸಂಪುಟ ಸಭೆಯ ಮೊದಲು ನಾವೆಲ್ಲರೂ ಭೇಟಿಯಾಗಿ ಜನಗಣತಿ ವರದಿಯ ಬಗ್ಗೆ ಚರ್ಚಿಸಿದೆವು, ನಮ್ಮ ಕಳವಳಗಳನ್ನು ಎತ್ತಿದೆವು ಮತ್ತು ಮುಂದಿನ ದಾರಿಯ ಬಗ್ಗೆ ಮಾತನಾಡಿದೆವು. ನಾವು ಒಗ್ಗಟ್ಟಾಗಿದ್ದೇವೆ’ ಎಂದರು.
ಲಿಂಗಾಯತರಿಗೆ ಪ್ರತ್ಯೇಕ ಧರ್ಮವನ್ನು ಪ್ರಸ್ತಾಪಿಸಿದಾಗ ಕಾಂಗ್ರೆಸ್ ಪಕ್ಷವು ಹಿನ್ನಡೆ ಅನುಭವಿಸಿದೆ ಎಂದು ಸಚಿವ ಶಿವಾನಂದ ಪಾಟೀಲ್ ಗಮನಸೆಳೆದಿದ್ದಾರೆ ಎಂದು ಅವರು ಹೇಳಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯಪ್ರವೇಶಿಸಿ ಅದು ಹಾಗಲ್ಲ ಎಂದು ಸ್ಪಷ್ಟಪಡಿಸಿದರು.