ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಶಾಸಕರಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತೃ ಪಕ್ಷಕ್ಕೆ ಮರಳುತ್ತಾರೆ? ಇಂಥದ್ದೊಂದು ಚರ್ಚೆ ರಾಜ್ಯ ರಾಜಕೀಯದಲ್ಲಿ ಆರಂಭವಾಗಿದೆ. ಇದೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆಂಬ ಚರ್ಚೆ ಒಟ್ಟಾರೆ ಬೆಳವಣಿಗೆಗಳನ್ನು ಕುತೂಹಲದತ್ತ ಕೊಂಡೊಯ್ದಿದೆ.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ವರಿಷ್ಠರ ಬಗ್ಗೆ ಮುನಿಸಿಕೊಂಡು ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದ್ದು, ಪ್ರಸಕ್ತ ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಯಾರೊಬ್ಬ ನಾಯಕರೂ ಸೂಕ್ತ ಅನ್ನಿಸದ ಪರಿಸ್ಥಿತಿ ಇದೆ. ಅಷ್ಟೇ ಅಲ್ಲ, ನೂತನ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಹಲವು ತಿಂಗಳಾದರೂ ವಿರೋಧಪಕ್ಷದ ನಾಯಕನ ಆಯ್ಕೆಯೂ ನಡೆದಿಲ್ಲ. ಈ ಹೀನಾಯ ಸ್ಥಿತಿಯನ್ನು ಬೊಟ್ಟು ಮಾಡಿರುವ ಪ್ರತಿಪಕ್ಷದ ಮುಖಂಡರು ಬಿಜೆಪಿಯಲ್ಲೀಗ ನಾಯಕರೇ ಇಲ್ಲ ಎಂದು ಗೇಲಿ ಮಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಮಾತೃ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ ಎಂಬ ಮಾತುಗಳೂ ಕೇಳಿಬಂದಿದೆ. ಈ ನಡುವೆ, ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆಂಬ ಸುದ್ದಿ ಒಟ್ಟಾರೆ ಚರ್ಚೆಗಳಿಗೆ ರೆಕ್ಕೆ-ಪುಕ್ಕಗಳನ್ನು ಜೋಡಿಸಿದಂತಿದೆ. ಆದರೆ, ಅಮಿತ್ ಷಾ ಜೊತೆಗಿನ ಮಾತುಕತೆಯ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮಾತುಕತೆ ನಡೆದಿದೆ ಎಂಬ ಸುದ್ದಿ ಕುರಿತಂತೆ ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಬಿಜೆಪಿ ಹೈಕಮಾಂಡ್‌ನಿಂದ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಅವರಿಂದ ನನಗೆ ಕರೆ ಬಂದರೆ ಕೂಡಲೇ ಮಾಧ್ಯಮದವರಿಗೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಬೆಳವಣಿಗೆಯನ್ನು ನಿರಾಕರಿಸಿದ್ದಾರೆ.