ದೆಹಲಿ: ಏಪ್ರಿಲ್ 1ರಿಂದ 10 ಸರ್ಕಾರಿ ಬ್ಯಾಂಕ್ ಗಳು ನಾಲ್ಕು ಬ್ಯಾಂಕ್ ಗಳಾಗಿ ವಿಲೀನವಾಗಲಿದೆ. ಈ ವಿಲೀನ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಆಂಧ್ರ ಬ್ಯಾಂಕ್, ಅಲಹಬಾದ್ ಬ್ಯಾಂಕ್, ಮತ್ತು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಹಿತ 10 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ವಿಲೀನಗೊಳಿಸಿ ನಾಲ್ಕು ಪ್ರಭಾವಿ ಬ್ಯಾಂಕ್’ಗಳನ್ನಾಗಿ ಮಾಡಲಾಗುತ್ತದೆ. ಬ್ಯಾಂಕ್’ಗಳನ್ನು ನಷ್ಟದಿಂದ ತಪ್ಪಿಸಲು ಹಾಗೂ ಕಾರ್ಯಕ್ಷಮತೆ ಹೆಚ್ಚಿಸಿ ಪರಿಣಾಮಕಾರಿ ಸೇವೆ ಒದಗಿಸುವುದು ಈ ವಿಲೀನ ಪ್ರಕ್ರಿಯೆಯ ಉದ್ದೇಶವಾಗಿದೆ.
ಬುಧವಾರ ಸಂಪುಟ ಕೈಗೊಂಡ ಈ ಮಹತ್ವದ ತೀರ್ಮಾನ ಕುರಿತಂತೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕ್’ಗಳ ವಿಲೀನದ ಬಗ್ಗೆ ಈಗಾಗಲೇ ಆಯಾ ಬ್ಯಾಂಕ್’ಗಳ ನಿರ್ದೇಶಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಬ್ಯಾಂಕ್’ಗಳ ವಿಲೀನಕ್ಕೆ ಯಾವುದೇ ಕಾನೂನಾತ್ಮಕ ತೊಡಕುಗಳಿಲ್ಲ. ಹಾಗಾಗಿ ಏಪ್ರಿಲ್ 1ರಿಂದ ಕಾರ್ಯಾಚರಿಸಲಿವೆ ಎಂದು ತಿಳಿಸಿದರು.