ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಎಷ್ಟು ಹೆಚ್ಚಿಸುವ ಕುರಿತಂತೆ ಬಜೆಟ್‌ನಲ್ಲೇ ಘೋಷಿಸುವ ಸಾಧ್ಯತೆಗಳ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆಶಾ ಕಾರ್ಯಕರ್ತೆಯರ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡ ಸಚಿವ ಡಾ.ಕೆ.ಸುಧಾಕರ್, ಸಂಘದ ಮನವಿ ಸ್ವೀಕರಿಸಿದರು. ಆಶಾ ಸಹೋದರಿಯರ ನ್ಯಾಯಯುತ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರ ಒಲವು ಹೊಂದಿದೆ ಎಂದು ತಿಳಿಸಿದರು.
ಆರೋಗ್ಯ ಸಚಿವ ಸುಧಾಕರ್ ನೀಡಿರುವ ಭರವಸೆಯ ಹೈಲೈಟ್ಸ್ ಹೀಗಿದೆ:
-
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮೊದಲ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹೆಚ್ಚಿಸಿದ್ದಾರೆ. ಈ ಸಲ ಕೂಡ ಕೆಲ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು.
-
ಇತ್ತೀಚೆಗೆ ಬಜೆಟ್ ಕುರಿತು ಮುಖ್ಯಮಂತ್ರಿ ಜೊತೆಗಿನ ಚರ್ಚೆಯ ವೇಳೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನವನ್ನು 2,000 ರೂ. ಹೆಚ್ಚಿಸಲು ಮನವಿ ಮಾಡಲಾಗಿದೆ.
-
ಆಶಾ ಕಾರ್ಯಕರ್ತೆಯರಿಗೆ 5 ಕೋಟಿ ರೂ. ಮೊತ್ತದ ಕ್ಷೇಮಾಭಿವೃದ್ಧಿ ನಿಧಿ ಇರಿಸಿ, ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ನೀಡಬೇಕು ಎಂಬ ಬೇಡಿಕೆ ಬಂದಿದೆ.
-
ತಾಂತ್ರಿಕ ನ್ಯೂನತೆ ನಿವಾರಿಸಿ, ಸರಿಯಾದ ಸಮಯಕ್ಕೆ ಗೌರವಧನ ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
-
ಕೋವಿಡ್ ಸಮಯದಲ್ಲಿ ಅನೇಕರು ವರ್ಕ್ ಫ್ರಂ ಹೋಮ್ ಮಾಡಿದ್ದರೆ ಆಶಾ ಕಾರ್ಯಕರ್ತೆಯರು ವರ್ಕ್ ಫ್ರಂ ಸ್ಟ್ರೀಟ್ ಮಾಡಿದ್ದರು. 10 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಅಥವಾ 60 ವಯಸ್ಸಿನ ಬಳಿಕ ನಿವೃತ್ತರಾಗಲು ಬಯಸಿದರೆ, ಅವರಿಗೆ ಇಡಿಗಂಟು ನೀಡಲು ಕ್ರಮ ವಹಿಸಬೇಕೆಂಬ ಬೇಡಿಕೆ ಇದೆ.
-
ಕೇವಲ ಮಾತಿನಲ್ಲಲ್ಲ, ಕೃತಿಯ ಮೂಲಕ ಆಶಾಗಳಿಗೆ ಕೊಡುಗೆ ನೀಡಲಾಗುವುದು.
-
ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಮೇಲೆ ಸಂಪೂರ್ಣ ಭರವಸೆ ಇದ್ದು, ಯಾವುದೇ ಆಶಾ ಕಾರ್ಯಕರ್ತೆಯರು ಅದನ್ನು ಹುಸಿ ಮಾಡಲಿಲ್ಲ.