ಬೆಂಗಳೂರು: ಮಾತು ತಪ್ಪಿದ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಪ್ರತಿಭಟನಾ ಅಖಾಡಲ್ಲೇ ಧುಮುಕಿರುವ ರಾಜ್ಯದ ಆಶಾ ಕಾರ್ಯಕರ್ತೆಯರು, ಆಗಸ್ಟ್ 12,13,14 ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲು ತಯಾರಿ ನಡೆಸಿದ್ದಾರೆ.
ಕಳೆದ ವರ್ಷದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸತತ ಪ್ರತಿಭಟನೆ ನಡೆಸಿರುವ ಆಶಾ ಕಾರ್ಯಕರ್ತೆಯರು, ಬೆಂಗಳೂರಿನಲ್ಲೂ ಭಾರೀ ಹೋರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ನುಡಿದಂತೆ ನಡೆದಿಲ್ಲ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಇತ್ತೀಚಿಗೆ ರಾಜ್ಯದ ಹಲವೆಡೆ ಸರಣಿ ಪ್ರತಿಭಟನೆ ನಡೆಸಿದ್ದ ಆಶಾ ಕಾರ್ಯಾಕಾರ್ಯಕರ್ತೆಯರು ಇದೀಗ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಗಸ್ಟ್ 12,13,14 ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲು ತಯಾರಿ ನಡೆಸಿದ್ದಾರೆ.
ಆಶಾಗಳ ಬೇಡಿಕೆಗಳು:
ಮುಖ್ಯಮಂತ್ರಿಗಳು ಘೋಷಿಸಿರುವ ರಾಜ್ಯದ ಗೌರವಧನ & ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ – ಮಾಸಿಕ ಕನಿಷ್ಟ ರೂ.10,000 ಗೌರವ ಧನವನ್ನು ಈ ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು.
2025 ಮಾರ್ಚ್ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.1,000 ಪ್ರೋತ್ಪಾಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಬೇಕು.
ಜನಸಂಖ್ಯೆ ಹೆಚ್ಚಿಸಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು.
ಅವೈಜ್ಞಾನಿಕ ಆಶಾ ಪರ್ಫಾಮೆನ್ಸ್ ಅಪ್ರೈಸಲ್ ಕೈಬಿಡಬೇಕು.
ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.
ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು.
2025ರಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಇನ್ನಿತರ ಬೇಡಿಕೆಗಳನ್ನೂ ಈಡೇರಿಸಬೇಕು.