ನಾಡಧ್ವಜಕ್ಕೆ ಸಿಗದ ಅನುಮತಿ; ಮೋದಿ ಸರ್ಕಾರದ ವಿರುದ್ದ ಸಿಎಂ ಕೆಂಡ; ನೆಟ್ಟಿಗರಿಂದ ಸಿಎಂಗೆ ತರಾಟೆ

ಬೆಂಗಳೂರು: ನಾಡ ಧ್ವಜಕ್ಕೆ ಅನುಮತಿ ನೀಡದೆ ಕೇಂದ್ರದ ಮೋದಿ ಸರ್ಕಾರ ಆರೂವರೆ ಕೋಟಿ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಈ ಹಿಂದೆ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಈ ಕೆಲಸವನ್ನು ಮಾಡಿಲ್ಲವೇಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಏನಿದು ಬೆಳವಣಿಗೆ?

ಸಿಎಂ ಸಿದ್ದರಾಮಯ್ಯ ಅವರು ಟ್ವಿಟರ್‌ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ‘ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ. ಕನ್ನಡಿಗರ ಎದೆಯ ದನಿಗೆ ಓಗೊಟ್ಟು ನಾಡದ್ವಜವೊಂದನ್ನು ವಿನ್ಯಾಸಗೊಳಿಸಿ, ಮನ್ನಣೆಗಾಗಿ ಐದು ವರ್ಷಗಳ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯ ಎಸಗಿದೆ’ ಎಂದು ಸಿಎಂ ದೂರಿದ್ದಾರೆ.

‘ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜಗಳನ್ನು ಹಾರಿಸಬಹುದೆಂದು ರಾಷ್ಟ್ರಧ‍್ವಜ ಸಂಹಿತೆಯೇ ಹೇಳಿದೆ. ಹೀಗಿರುವಾಗ ಯಾಕೆ ಕನ್ನಡಿಗರ ಬಗ್ಗೆ ನಿಮಗೆ ತಾತ್ಸಾರ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಎಂದು ಕೇಳಿದ್ದಾರೆ. ‘ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂದವರು ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ನೆಟ್ಟಿಗರು ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಬಾಯೀ ಬಿಟ್ಟರೆ ಬರಿ ಸಂವಿಧಾನ ಬಗ್ಗೆ ಮಾತನಾಡುವ ನೀವು “ಸಂವಿಧಾನ ತಜ್ಞ” ಯಾವ ಸಂವಿಧಾನದ ಅಡಿಯಲ್ಲಿ ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಧ್ವಜವನ್ನು ಹೊಂದುವ ಹಕ್ಕಿದೆ ಎಂದು ಬರೆದಿದೆ. ನಿಮಗೆ ಗೊತ್ತಿಲ್ಲವೇ ಅಥವಾ ಜಾಣ ಕಿವುಡು ಪ್ರದರ್ಶನವೇ? ಧ್ವಜದ ಹೆಸರಿನಲ್ಲಿ ನಾಟಕವೇ? ಅಥವಾ ರಾಜಕೀಯವೇ?’ ಎಂದು ಒಬ್ಬರು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನೊಬ್ಬರು, ‘ದೇಶಕ್ಕೆ ಸ್ವಾತಂತ್ರ್ಯ ಬಾಂದು ಕಾಂಗ್ರೆಸ್ ಪಕ್ಷ ಅರವತ್ತು ವರ್ಷ ಆಡಳಿತ ನಡೆಸಿದಾಗ ಯಾಕೆ ಈ ಕೆಲಸ ಮಾಡಿಲ್ಲ’ ಎಂದು ಪ್ರಶ್ನಿಸಿದ್ದಾರೆ. ‘ರಾಜ್ಯಕ್ಕೆ ಒಂದು ಸ್ವತಂತ್ರವಾದ ನಾಡಧ್ವಜ ನೀಡಲು ಸಂವಿಧಾನದಲ್ಲಿ ಅವಕಾಶವಿದೆಯ?

ನೀವು ಈ ರೀತಿಯ ಡ್ರಾಮ ಚೆನ್ನಾಗಿ ಮಾಡುತ್ತೀರಿ’ ಎಂದೂ ವ್ಯಂಗ್ಯವಾಡಿದ್ದಾರೆ.

Related posts