ಹಲವಾರು ಎಡವಟ್ಟುಗಳು, ಹಲವಾರು ಅಕ್ರಮಗಳು; ಜಾತಿ ಗಣತಿಯ ಲೋಪಗಳತ್ತ ಬೆಳಕು ಚೆಲ್ಲಿದ ಅಶೋಕ್

ಬೆಂಗಳೂರು: ಜಾತಿ ಜನಗಣತಿ ವಿವಾದ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಮುದಾಯಗಳು ತಿರುಗಿ ಬಿದ್ದಿವೆ.
ಈ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರವೇ ಹೊಣೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಜನಗಣತಿ ಸಂದರ್ಭದಲ್ಲಿ ಸರಿಯಾದ ಸಿದ್ಧತೆಯಿಲ್ಲದೆ ಕ್ರಮವಹಿಸಲಾಗಿದೆ ಎಂಬ ಕಹಿ ಸತ್ಯವನ್ನು ಆರ್.ಅಶೋಕ್ ನೆನಪಿಸಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.

ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಕಾಟಾಚಾರಕ್ಕೆ ನಡೆಸಿದ ಜಾತಿ ಜನಗಣತಿ ಸಮೀಕ್ಷೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿತ್ತು, ಅವ್ಯವಸ್ಥೆಯ ಗೂಡಾಗಿತ್ತು ಎನ್ನುವುದಕ್ಕೆ ಅಂದಿನ ಪತ್ರಿಕಾ ವರದಿಗಳೇ ಸಾಕ್ಷಿ ಎಂದು ಬೊಟ್ಟು ಮಾಡಿರುವ ಅಶೋಕ್, ಜಾತಿ ಜನಗಣತಿಗಾಗಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿಗಳಿಗೆ ಗಣತಿ ಅರ್ಜಿ ತುಂಬುವ ಬಗ್ಗೆ ತರಬೇತಿಯನ್ನೇ ನೀಡಿರಲಿಲ್ಲ. ಗಣತಿ ಅರ್ಜಿಯಲ್ಲಿದ್ದ 56 ಕಾಲಂಗಳಲ್ಲಿ ಸಮೀಕ್ಷೆದಾರರು ಪ್ರಾಮಾಣಿಕವಾಗಿ ತುಂಬುತಿದ್ದುದು ಕೇವಲ 8-10 ಕಾಲಂ ಮಾತ್ರ. ಉಳಿದ ಕಾಲಂಗಳ ಭರ್ತಿಗೆ ಮಾನದಂಡ “ಅಂದಾಜು”, “ಅಕ್ಕ-ಪಕ್ಕದ ಮನೆಯವರ ಹೆಸರು” ಎಂಬಿತ್ಯಾದಿ ರೀತಿ ಉಲ್ಲೇಖಿಸಲಾಗಿದೆ ಎಂದು ಅವರು ಮಾಡ್ಯಾಆಮ್ಮ ವರದಿಗಳಲ್ಲಿನ ಅಂಶಗಳನ್ನು ನೆನಪಿಸಿದ್ದಾರೆ.
ಉಪಜಾತಿ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಗೊಂದಲದಿಂದ ಕಾಲಂ ಖಾಲಿ. ಬಿಸಿಲು, ಮಳೆಯ ನೆಪವೊಡ್ಡಿ ಸಮೀಕ್ಷೆದಾರರು ಮನೆಮನೆಗೂ ತೆರಳಿ ಸಮೀಕ್ಷೆ ನಡೆಸಲು ಹಿಂದೇಟು. ಹಲವೆಡೆ 2011ರ ಜನಗತಿಯ ನಕಲು ಪ್ರತಿಗಳನ್ನು ಆಧಾರವನ್ನಾಗಿಟ್ಟುಕೊಂಡು ಮಕ್ಕಳ ಕೈಯಲ್ಲಿ ಜಾತಿ ಗಣತಿ ಅರ್ಜಿ ಭರ್ತಿ. ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ. ಸಮೀಕ್ಷೆಗೆ ಒಳಪಟ್ಟವರ ಸಹಿಯನ್ನೂ ಮಕ್ಕಳೇ ಹಾಕುತ್ತಾರೆ. ಅಗತ್ಯವಿದ್ದಲ್ಲಿ ಹೆಬ್ಬೆಟ್ಟನ್ನು ಸಹ ಮಕ್ಕಳೇ ಒತ್ತುತ್ತಾರೆ ಎಂಬ ಸುದ್ದಿಗಳತ್ತ ಆರ್.ಅಶೋಕ್ ಬೆಳಕು ಚೆಲ್ಲಿದ್ದಾರೆ.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಗಾದೆಯನ್ನು ಉದಾಹರಿಸಿರುವ ಆರ್.ಅಶೋಕ್, ಇಷ್ಟೆಲ್ಲಾ ಎಡವಟ್ಟುಗಳಿರುವ ಜಾತಿ ಜನಗಣತಿ ವರದಿಯನ್ನ ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಏನಿದೆ? ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅಲುಗಾಡುತ್ತಿರುವ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಜನಗಣತಿ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಯಾಕೆ ಬಿತ್ತುತ್ತೀರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Related posts