ದೆಹಲಿ: ಭಾರತೀಯಬ್ಯಾಂಕುಗಳಿಗೆ ದಂಡ ಹಾಗೂ ಶುಲ್ಕಗಳೇ ಲಾಭದ ಅಸ್ತ್ರವಾಗಿದೆ. ಬ್ಯಾಂಕ್ ದಂಡ, ಶುಲ್ಕದಿಂದ 35 ಸಾವಿರ ಕೋಟಿ ಸಂಗ್ರಹ, ಮಿನಿಮಮ್ ಬ್ಯಾಲೆನ್ಸ್ ದಂಡವೇ 21 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ಒದಗಿಸಿದೆ.
ಈ ಕುರಿತು ರಾಜ್ಯಸಭೆಯಲ್ಲಿ ಸಂಸದೆ ಅಮೀ ಯಾಗ್ನಿಕ್ ಅವರ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಮಾಹಿತಿ ನೀಡಿದ್ದು, ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದೇ ಇರುವುದಕ್ಕೆ ದಂಡ ಹಾಗೂ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆಗೆ ಶುಲ್ಕ ಹಾಗೂ ಎಸ್‌ಎಂಎಸ್ ಸೇವೆಗೆ ಶುಲ್ಕದ ಮೂಲಕ ವಾಣಿಜ್ಯ ಬ್ಯಾಂಕ್‌ಗಳು ಸುಮಾರು 35,587.68 ಕೋಟಿ ಸಂಗ್ರಹಿಸಿವೆ ಎಂದು ವಿವರಿಸಿದ್ದಾರೆ. 2018ರಿಂದ ಈಚೆಗೆ ಗ್ರಾಹಕರಿಂದ ಸಂಗ್ರಹವಾಗಿರುವ ಲೆಕ್ಕವನ್ನು ಅವರು ಸದನಕ್ಕೆ ಒದಗಿಸಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಎಕ್ಸಿಸ್ ಬ್ಯಾಂಕ್, ಸಹಿತ ಸರ್ಕಾರಿ ಸ್ವಾಮ್ಯ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ನೀಡಿರುವ ಅಂಕಿ–ಅಂಶಗಳನ್ನು ಆಧರಿಸಿ ಈ ಮಾಹಿತಿ ಹಂಚಿಕೊಂಡಿರುವ ಸಚಿವರು, ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದ್ದಕ್ಕೆ ದಂಡವಾಗಿ 21,044.04 ರೂಪಾಯಿ ಸಂಗ್ರಹವಾಗಿದ್ದು, ಉಚಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆ ಸಂಬಂಧ 8,289.32 ರೂಪಾಯಿ ಸಂಗ್ರಹವಾಗಿದೆ. ಎಸ್‌ಎಂಎಸ್ ಸೇವೆಗಳಿಗೆ 6,254.32 ರೂಪಾಯಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.