ಬಸವೇಶ್ವರ ಜಯಂತಿ ; ಬಸವಣ್ಣರ ಸೂತ್ರದಂತೆ ಸಾಗೋಣ; ಸಂಸ್ಕೃತಿ ಸಚಿವ ಸಿ.ಟಿ.ರವಿ ಕರೆ

ಚಿಕ್ಕಮಗಳೂರು: ಮನುಕುಲಕ್ಕೆ ಸಮಾನತೆಯ ಸೂತ್ರ ಹೇಳಿಕೊಟ್ಟ ಮಹಾ ಸಂತನ ಜನ್ಮ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ರಾಜ್ಯ ಸರ್ಕಾರದ ವತಿಯಿಂದಲೂ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮ ಗಮನಸೆಳೆಯಿತು.

ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಈ ಸಮಾರಂಭವನ್ನೂ ಅತ್ಯಂತ ಸರಳವಾಗಿ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಬಸವೇಶ್ವರರ ಭಾವ ಚಿತ್ರಕ್ಕೆ ನಮಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳಷ್ಟೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಈ ವೇಳೆ ಮಾತನಾಡಿದ ಸಚಿವ ಸಿ.ಟಿ.ರವಿ, ಎಲ್ಲಾ ಜಯಂತಿ ಆಚರಣೆಗಳನ್ನು ಅದ್ದೂರಿಯಾಗಿ ನಡೆಸುವುದಿಲ್ಲ ಎಂಬ ನಿಲುವಿಗೆ ಸರ್ಕಾರ ಬದ್ಧವಾಗಿದೆ. ಅದರಂತೆ ಈಗ ನಡೆಯುವ ಎಲ್ಲಾ ಆಚರಣೆಯ ಖರ್ಚನ್ನು ಉಳಿಸಿ ಕೋವಿಡ್-೧೯ ನಿಯಂತ್ರಣದ ಕೆಲಸ ಹಾಗೂ ಕಲಾವಿದರ ನೆರವಿಗೆ ಬಳಸಲಾಗುವುದು ಎಂದು ತಿಳಿಸಿದರು.

ಮನುಕುಲಕ್ಕೆ ಶಾಂತಿ ಸಂದೇಶವನ್ನಷ್ಟೇ ಅಲ್ಲ, ಸರಳ ಬದುಕಿನ ಸೂತ್ರ ಕೇಳಿಕೊಟ್ಟ ಜಗಜ್ಯೋತಿ ಬಸವೇಶ್ವರರ ಆದರ್ಶವನ್ನು ನೆನಪಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದ ಸಚಿವ ಸಿ.ಟಿ.ರವಿ, ಬಸವಣ್ಣರವರ ಅನುಭವ ಮಂಟಪದ ಪ್ರೇರಣೆಯಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. ಆದರೆ ಅವರ ಜಾತ್ಯತೀತೆಯ ಆಶಯ ಈಡೇರಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು ಜಾತೀಯತೆಯ ನಿಲುವಿನಿಂದ ನಾವೆಲ್ಲರೂ ಹೊರಬರಬೇಕಿದೆ ಎಂದರು.

ಧರ್ಮದ ಮೂಲ ಸತ್ವವನ್ನು ಹೇಳಿದವರು ಬಸವಣ್ಣ. ಕೆಲವು ಮತಧರ್ಮಗಳು ತಮ್ಮ ಸಮುದಾಯದ ಒಳ್ಳೆಯದನ್ನು ಬಯಸುತ್ತವೆ. ಕೆಲವು ಧರ್ಮಗಳುಮನುಷ್ಯರಿಗೆ ಮಾತ್ರ ಒಳಿತಾಗಲಿ ಎಂದು ಬಯಸುತ್ತವೆ. ಆದರೆ ಬಸವಣ್ಣರವರು ಸಕಲ ಜೀವರಾಶಿಗಳಿಗೆ ಒಳ್ಳೆಯದಾಗಲಿ ಎಂದು ಬಯಸಿದವರಾಗಿದ್ದಾರೆ ಎಂದು ಸಿ.ಟಿ.ರವಿ ನೆನಪಿಸಿದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್, ತಾಲೂಕ್ ಪಂಚಾಯತ್ ಅಧ್ಯಕ್ಷೆ ಶುಭ ಸತ್ಯಮೂರ್ತಿ ಮೊದಲಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts