ಕುರ್ಚಿ ಏರುವ ಮುನ್ನವೇ ಮೈತ್ರಿ ಸರ್ಕಸ್.. ಬಿಜೆಪಿ ನಿಯೋಜಿತ ಅಧ್ಯಕ್ಷರಿಂದ ದೇವೇಗೌಡ ಭೇಟಿ

ಬೆಂಗಳೂರು: ಬಿಜೆಪಿ ರಾಜ್ಯಾದ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್​.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ ಅವರು, ಮಾಜಿ ಪ್ರಧಾನಿಯವರ ಆಶೀರ್ವಾದ ಪಡೆದರು. ದೇವೇಗೌಡರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಉಪಸ್ಥಿತರಿದ್ದರು.

ಎನ್‌ಡಿ‌ಎ ಸೇರಿರುವ ಜೆಡಿಎಸ್,
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆದಿದ್ದು, ಇದೀಗ ಬಿ.ವೈ‌.ವಿಜಯೇಂದ್ರ ಅವರು ತಾವು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಲಂಕರಿಸುವ ಮುನ್ನ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಬೆಳವಣಿಗೆ ರಾಜಕೀಯವಾಗಿ ಭಾರೀ ಮಹತ್ವ ಪಡೆದುಕೊಂಡಿದೆ.

ಕಮಲ ಸೇನಾನಿಗಳಲ್ಲೂ ರಣೋತ್ಸಾಹ..!

ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ಹೈಕಮಾಂಡ್ ನೇಮಕ ಮಡುತ್ತಿದ್ದಂತೆಯೇ ಕಮಲ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದಂತಿದೆ. ವಿಜಯೇಂದ್ರ ಅವರು ಭರ್ಜರಿ ಚಟುವಟಿಕೆಗಳಿಗೆ ಮುನ್ನುಡಿ ಬರೆದಿದ್ದಾರೆ. ಜೊತೆಗೆ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿಯಾಗುತ್ತಿರುವ ವೈಖರಿ, ಹಿರಿಯ ನಾಯಕರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುತ್ತಿರುವ ನಡೆ, ಎದುರಾಳಿ ಪಕ್ಷಗಳ ಮುಖಂಡರನ್ನೂ ಭೇಟಿಯಾಗಿ ಚರ್ಚಿಸುತ್ತಿರುವ ವೈಖರಿ ಕೂಡಾ ಬಿಜೆಪಿ ಕಾರ್ಯಕರ್ತರ ಕಾರ್ಯಕರ್ತರ ಕುತೂಹಲದ ಕೇಂದ್ರಬಿಂದುವಾಗಿದೆ. ಜವಾಬ್ಧಾರಿ ವಹಿಸಿಕೊಳ್ಳುವ ಮೊದಲೇ ವಿಜಯೇಂದ್ರ ಅವರಲ್ಲಿ ವ್ಯಕ್ತವಾಗುತ್ತಿರುವ ಸಂಘಟನಾ ಉತ್ಸಾಹ ಕಮಲ ಸೇನಾನಿಗಳಲ್ಲೂ ರಣೋತ್ಸಾಹ ಸೃಷ್ಟಿಸಿದೆ.

Related posts