ಬೆಂಗಳೂರು: ಕೇವಲ ದಕ್ಷ, ಆರಾಮದಿಂದ ಆರೆಸ್ಸೆಸ್ (ಸಂಘ) ಬೆಳೆದಿಲ್ಲ. ವೀಕಿರದ ನಂತರದ ಅನೌಪಚಾರಿಕತೆಯಲ್ಲಿ ಸಂಘ ಬೆಳೆದಿದೆ. ಅದರಂತೆ ಆತ್ಮೀಯತೆ, ಪ್ರೀತಿ, ವಿಶ್ವಾಸದೊಂದಿಗೆ ಪಕ್ಷವನ್ನು ಬೆಳೆಸಬೇಕು ಎಂದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ ಬಿಜೆಪಿ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಪಕ್ಷದ ಕಾರ್ಯ ವಿಸ್ತರಣೆ, ಗುಣಾತ್ಮಕ ಬದಲಾವಣೆ, ವ್ಯಕ್ತಿಗಳಲ್ಲಿ ಉತ್ತಮ ಗುಣ ಬೆಳೆಸುವುದು, ಯೋಗ್ಯ ವ್ಯಕ್ತಿಗಳನ್ನು ಮೇಲೆ ತರುವ ಕೆಲಸವನ್ನು ಪಕ್ಷ ಮಾಡಬೇಕು. ಪರಿಶ್ರಮದ ಕೆಲಸ ನಮ್ಮದಾದಾಗ ನಮಗೆ ಗೌರವ ಬರುತ್ತದೆ. ಸಾಂಸ್ಥಿಕ ವ್ಯವಸ್ಥೆಯ ಜೊತೆಗೆ ಜೋಡಿಸಿಕೊಂಡು ಕೆಲಸ ಮಾಡಿದಾಗ ನಮಗೆ ಗೌರವ ಲಭಿಸುತ್ತದೆ ಎಂದರು.
ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವು ಬಿಜೆಪಿಯ ಹೆಬ್ಬಾಗಿಲು ಎಂಬ ಮಾತಿದೆ. ರಾಜಕೀಯವಾಗಿ ಹಿಂದಿರುವ ಜಿಲ್ಲೆಗಳಲ್ಲಿ ಬಿಜೆಪಿ ಬೆಳೆಯಲು ನಮ್ಮ ಆಲೋಚನೆ ಏನು? ಪಕ್ಷದ ಬೆಳವಣಿಗೆ ಮತ್ತು ಸಶಕ್ತೀಕರಣಕ್ಕೆ ನಮ್ಮ ಕಾರ್ಯತಂತ್ರಗಳೇನು ಎಂದು ಅವರು ಪ್ರಶ್ನಿಸಿದರು.
ಅಮಿತ್ ಶಾ ಅವರಿಗೆ ಉತ್ತರ ಪ್ರದೇಶದ ಜವಾಬ್ದಾರಿ ಕೊಟ್ಟಾಗ ಅಲ್ಲಿ ಬಿಜೆಪಿಯ ಕೇವಲ 10 ಜನ ಸಂಸದರಿದ್ದರು ಹಾಗೂ 41 ಜನ ಶಾಸಕರಿದ್ದರು. ನಂತರದ ಚುನಾವಣೆಯಲ್ಲಿ 80 ಸಂಸದರ ಸ್ಥಾನಗಳಲ್ಲಿ 73 ಸ್ಥಾನ ಬಿಜೆಪಿಗೆ ಮತ್ತು ಮಿತ್ರಪಕ್ಷಕ್ಕೆ 2 ಸ್ಥಾನ ಲಭಿಸಿತು. ಸಾಮಾಜಿಕ ಸಮೀಕರಣವೇ ಇದಕ್ಕೆ ಕಾರಣ. ಇಂಥ ಸಾಮಾಜಿಕ ಸಮೀಕರಣ ನಮ್ಮ ಜಿಲ್ಲೆಯಲ್ಲೂ ಸಾಧ್ಯವೇ ಎಂಬ ಅವಲೋಕನ ಅಗತ್ಯ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಶಾಸಕರಾದ ಎಸ್.ರಘು, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಬೆಂಗಳೂರು ಕೇಂದ್ರ ಅಧ್ಯಕ್ಷ ಮಂಜುನಾಥ್ ಮೊದಲಾದ ನಾಯಕರು ವೇದಿಕೆಯಲ್ಲಿದ್ದರು.