ಸಿಎಂ ಭೇಟಿಯಾದ BJP ಶಾಸಕ ST ಸೋಮಶೇಖರ್; ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮನವಿ

ಬೆಂಗಳೂರು; ರಾಜಕೀಯ ಟೀಕೆಗಳಿಗೆ ಅಂಜದೆ, ವದಂತಿಗಳಿಗೆ ಸೊಪ್ಪೂ ಹಾಕದೆ ತನ್ನ ನಡೆ ಸ್ಪಷ್ಟವಾಗಿದೆ ಎನ್ನುತ್ತಿರುವ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ತಮ್ಮನ್ನು ಗೆಲ್ಲಿಸಿರುವ ಯಶವಂತಪುರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆಯ ಚರ್ಚೆ ನಡೆದಿರುವಾಗಲೇ ಶಾಸಕ ಎಸ್‌.ಟಿ.ಸೋಮಶೇಖರ್ ಅವರು ಭಾನುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುದ್ದಿಗಳಿಗೆ ಗುದ್ದು ಕೊಟ್ಟಿದ್ದಾರೆ. ಅವರ ಈ ಭೇಟಿ ಪಕ್ಷಾಂತರ ವಿಚಾರಕ್ಕೆ ಸಂಬಂಧಪಟ್ಟಿರಬಹುದೆಂಬ ಕುತೂಹಲ ಎಲ್ಲರನ್ನು ಕಾಡಿತ್ತಾದರೂ ಅವರ ಈ ಭೇಟಿ ರಾಜಕಾರಣದ ಬದಲಾಗಿ ಕ್ಷೇತ್ರದ ಅಭಿವೃದ್ಧಿಗೆ ಸೀಮಿತವಾಗಿತ್ತು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮುಖ್ಯಮಂತ್ರಿ ನಿವಾಸದಲ್ಲಿಂದು (ಭಾನುವಾರ) ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕುತೂಹಲದ ಕೇಂದ್ರಬಿಂದುವಾದರು. ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ತುರ್ತಾಗಿ ಆಗಬೇಕಿರುವ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಿದರು.

ಕೆಂಗೇರಿ ಹೋಬಳಿಯಲ್ಲಿ ಸಣ್ಣ ಹೆರಿಗೆ ಆಸ್ಪತ್ರೆ ಇದ್ದು ಜನಸಂಖ್ಯೆಗೆ ಅನುಗುಣವಾಗಿ ನೂತನವಾಗಿ ಹೆರಿಗೆ ಆಸ್ಪತ್ರೆ ನಿರ್ಮಿಸಲು ಸರ್ ಎಂ.ವಿಶ್ವೇಶ್ವರಯ್ಯ 2ನೇ ಬ್ಲಾಕ್ ಬಡಾವಣೆಯಲ್ಲಿ ಬಿಡಿಎ ವತಿಯಿಂದ 3432 ಚ.ಮೀ.ನಷ್ಟು ಸಿ.ಎ. ನಿವೇಶನ ಮಂಜೂರಾಗಿದೆ. ಆದರೆ ಹೆರಿಗೆ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿ ಮುಂದಾಗಿಲ್ಲ ಎಂದು ಸೋಮಶೇಖರ್ ಅವರು ಮುಖ್ಯಮಂತ್ರಿಯ ಗಮನಸೆಳೆದರು.

ಹೆರಿಗೆ ಆಸ್ಪತ್ರೆ ಇಲ್ಲದಿರುವುದರಿಂದ ಹೆಣ್ಣುಮಕ್ಕಳು ನಗರದ ಕೇಂದ್ರ ಭಾಗದಲ್ಲಿರುವ ವಾಣಿವಿಲಾಸ ಆಸ್ಪತ್ರೆಗೆ ತೆರಳುವಂತಾಗಿದೆ. ವಾಣಿವಿಲಾಸ ಆಸ್ಪತ್ರೆ ದೂರವಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಒಂದು ಲಕ್ಷ ರೂ.ಗಳವರಗೆ ಬಿಲ್ ಪಾವತಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಕೆಂಗೇರಿ ಭಾಗದಲ್ಲಿ ತುರ್ತಾಗಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಬಿಬಿಎಂಪಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ಕೆಂಗೇರಿ ಉಪನಗರದಲ್ಲಿರುವ ಎಲ್ ಸಿ10ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಆಗುತ್ತಿರುವುದರಿಂದ ಓವರ್ ಬ್ರಿಡ್ಜ್ ನಿರ್ಮಿಸುವಂತೆ ಮೈಲಸಂದ್ರ ಮತ್ತು ಕೆಂಗೇರಿ ಉಪನಗರದ ನಿವಾಸಿಗಳ ಒತ್ತಾಸೆಯಾಗಿದೆ. ಮೇಲ್ಸೇತುವೆ ನಿರ್ಮಾಣದ ಕುರಿತಂತೆ ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದು ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆಯೂ ಮುಖ್ಯಮಂತ್ರಿಗೆ ಎಸ್.ಟಿ.ಸೋಮಶೇಖರ್ ಅವರು ಮನವಿ ಮಾಡಿದ್ದಾರೆ.

Related posts