ಮೆಟ್ರೋ ಪ್ರಯಾಣ ದುಬಾರಿ: ತೇಜಸ್ವಿ ಸೂರ್ಯ ಆಕ್ಷೇಪ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ಆಕ್ಷೇಪಿಸಿದ್ದಾರೆ.

ನಗರದ ಮೆಟ್ರೋದಲ್ಲಿ ದಿನವೂ ಸರಾಸರಿ 10 ಲಕ್ಷ ಜನರು – ವಿದ್ಯಾರ್ಥಿಗಳು, ಸಾಮಾನ್ಯ ಉದ್ಯೋಗಿಗಳು, ಐಟಿ-ಬಿಟಿ ವಲಯದವರು – ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದರ ಏರಿಕೆಯಿಂದ ಸಾಮಾನ್ಯ ಬಳಕೆದಾರರಿಗೆ ಮೆಟ್ರೋ ದುಬಾರಿಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ದರ ಏರಿಕೆಯಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತಿ ದುಬಾರಿ ಮೆಟ್ರೋ ಆಗಿದೆ. ಡೆಲ್ಲಿ ಮೆಟ್ರೋ ದರ ಏರಿಕೆ ಗರಿಷ್ಠ ₹4ಕ್ಕೆ ಮಿತವಾಗಿದ್ದರೆ, ಬೆಂಗಳೂರಿನಲ್ಲಿ ಪ್ರತಿ ಪ್ರಯಾಣಕ್ಕೂ ಅತಿಯಾದ ಭಾರವಾಗಿದೆ” ಎಂದು ಅವರು ಹೋಲಿಕೆ ಮಾಡಿದ್ದಾರೆ.

25 ಕಿ.ಮೀ. ಗಿಂತ ಹೆಚ್ಚು ದೂರ ಕೆಲಸಕ್ಕೆ ಪ್ರಯಾಣಿಸುವವರು ಪ್ರತಿ ಸಾರಿ ₹90 ಪಾವತಿಸಬೇಕಾಗುತ್ತದೆ. ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ ವೆಚ್ಚ ಸೇರಿ ಇದು ಸಾರ್ವಜನಿಕ ಸಾರಿಗೆಗೆ ನಿರುತ್ಸಾಹ ಉಂಟುಮಾಡಿ ಖಾಸಗಿ ವಾಹನ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ತೇಜಸ್ವಿ ಎಚ್ಚರಿಸಿದ್ದಾರೆ.

“ಈ ದರ ಏರಿಕೆ ಯಾವ ಆಧಾರದ ಮೇಲೆ ಜಾರಿಯಾಯಿತು? ಶುಲ್ಕ ನಿಗದಿ ಸಮಿತಿ (FFC) ವರದಿಯನ್ನು ಹೈಕೋರ್ಟ್ ಮುಂದೆ ಸಾರ್ವಜನಿಕಗೊಳಿಸುವ ಭರವಸೆ ನೀಡಿದ್ದರೂ BMRCL ಇನ್ನೂ ಪ್ರಕಟಿಸಿಲ್ಲ” ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು BMRCL ತಕ್ಷಣವೇ FFC ವರದಿಯನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Related posts