ಮಾ.4ರಿಂದ 20ರವರೆಗೆ ಫಲಾನುಭವಿಗಳ ಸಮಾವೇಶ: ಬಿಜೆಪಿ ಸರ್ಕಾರದ ಸಾಧನೆ ಅನಾವರಣಕ್ಕೆ ತಯಾರಿ

ಬೆಂಗಳೂರು: ಸಾಮಾಜಿಕ ನ್ಯಾಯದ ಪರ ಹಾಗೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರಕಾರ ಆಡಳಿತಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಮಾಡಿರುವ ಕ್ರಾಂತಿಕಾರಕ ಕಾರ್ಯಗಳನ್ನು ತಮ್ಮ ಮುಂದೆ ಹಂಚಿಕೊಳ್ಳಲು ಹೆಮ್ಮೆಯೆನಿಸುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.  ಮಾ.4ರಿಂದ 20ರವರೆಗೆ ಫಲಾನುಭವಿಗಳ ಸಮಾವೇಶ ಮೂಲಕ ಬಿಜೆಪಿ ಸರ್ಕಾರದ ಸಾಧನೆ ಅನಾವರಣಕ್ಕೆ ತಯಾರಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.ಬ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಗಣಿ ಹಾಗೂ ಭೂವಿಜ್ಞಾನ ಸಚಿವರಾದ ಹಾಲಪ್ಪ ಆಚಾರ್, ಅಬಕಾರಿ ಸಚಿವ ಗೋಪಾಲಯ್ಯ, ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಜೊತೆ ಜಂಟಿ‌ ಮಾಧ್ಯಮಗೋಷ್ಠಿ ನಡೆಸಿದ ಸಚಿವ ಎಸ್.ಟಿ.ಸೋಮಶೇಖರ್, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ‘ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್’ ಎಂಬುದೂ ನಮ್ಮ ಆಡಳಿತದ ಮೂಲ ಮಂತ್ರ. ಇದನ್ನು ನಾವು ಮಾತನಾಡಿ ಸುಮ್ಮನಾಗಲಿಲ್ಲ. ಅದನ್ನು ಕಾರ್ಯರೂಪಕ್ಕೆ ಇಳಿಸಿದೆವು. ಇದರ ಪರಿಣಾವಾಗಿ ಸಮಾಜದ ಕಲ್ಯಾಣಕ್ಕೆ ಪೂರಕವಾದ ಯೋಜನೆಗಳು ನಾಡಿನ ಪ್ರತೀ ಮನೆ ಮನೆಯನ್ನೂ ತಲುಪಿದೆ ಎಂದರು.

ರಾಜ್ಯ ಸರಕಾರದ ಯೋಜನೆಗಳ ಫಲವನ್ನು ಪ್ರತೀ ಮನೆಯ ಒಂದಿಲ್ಲೊಂದು ಫಲಾನುಭವಿಗಳನ್ನು ತಲುಪಿದೆ. ಈ ಮೂಲಕ ಲಕ್ಷಾಂತರ ಜನರು ಸರಕಾರದ ಸಹಾಯವನ್ನು ಪಡೆಯುತ್ತಿದ್ದಾರೆ. ಜಿಲ್ಲಾವಾರು ಅವಲೋಕನ ನಡೆಸಿದರೆ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಂಖ್ಯೆ ನಮ್ಮ ಸರಕಾರ ಬಂದ ಮೇಲೆ ಪ್ರತೀ ಜಿಲ್ಲೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ ಎಂದ ಅವರು, ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದ ಈ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರೊಡನೆ ಯೋಜನೆಗಳು ತಲುಪಿರುವುದನ್ನು ಖಾತ್ರಿ ಪಡಿಸಬೇಕು ಹಾಗೂ ಈ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಈ ಫಲಾನುಭವಿಗಳೊಡನೆ ಸಮಾಲೋಚಿಸಿ, ಮತ್ತಷ್ಟು ಜನಹಿತ ಚಿಂತನೆಗಳನ್ನು ಯೋಚಿಸಿ, ಯೋಜಿಸಬೇಕೆಂಬುದು ನಮ್ಮ ಮುಖ್ಯಮಂತ್ರಿಗಳ ಆಶಯವಾಗಿದೆ. ಇದಕ್ಕಾಗಿ ನಾವು ಪ್ರತೀ ಜಿಲ್ಲೆಯಲ್ಲೂ ಫಲಾನುಭವಿಗಳ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಇದು ನಮ್ಮ ಸರ್ಕಾರದ ಸಾಧನೆಯ ಪ್ರದರ್ಶನವಲ್ಲ, ನಾಡಿನ ಜನತೆಗೆ ನಮ್ಮ ನಿಜವಾದ ಕಳಕಳಿಯಿಂದ ರೂಪಿತವಾದ ಯೋಜನೆಗಳು ಜನರನ್ನು ತಲುಪಿರುವುದನ್ನು ಖಾತ್ರಿಪಡಿಸಿಕೊಳ್ಳುವುದೇ ಇದರ ಉದ್ದೇಶ. ಈ ಮೂಲಕ ನಮ್ಮ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಮುಖತಃ ಭೇಟಿ ಮಾಡುವುದೂ ಈ ಸಮಾವೇಶದ ಉದ್ದೇಶವಾಗಿದೆ ಎಂದ ಸಚಿವರು, ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಪಿಎಂ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ, ಲಂಬಾಣಿ ಜನಾಂಗದವರಿಗೆ ನೀಡಿದ ಹಕ್ಕು ಪತ್ರ ವಿತರಣೆ, ನೇಕಾರ ಮೀನುಗಾರರಿಗೆ ಸಮ್ಮಾನ್ ಯೋಜನೆ, ಮಾತೃ ವಂದನ ಯೋಜನೆ, ಭಾಗ್ಯಲಕ್ಷ್ಮಿ/ಸುಕನ್ಯಾ ಸಮೃದ್ಧಿ, ಯಶಸ್ವಿನಿ ಯೋಜನೆಗಳಂತಹವುಗಳ ಲಾಭ ನೇರವಾಗಿ ಜನರಿಗೆ ತಲುಪುವಂತಹ ಯೋಜನೆಗಳ ಜೊತೆಗೆ, ಜನಸೇವಕ, ಗ್ರಾಮ ಒನ್‌ನಂತಹ ಯೋಜನೆಗಳು, ಭೂ ಪರಿವರ್ತನೆ ವಿಧೇಯಕಕ್ಕೆ ತಿದ್ದುಪಡಿ ತಂದಿರುವುದು ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಸೌಕರ್ಯವನ್ನೊದಗಿಸುವ ಯೋಜನೆಗಳಾಗಿವೆ ಎನ್ನುವುದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಸಂಗತಿ ಎಂದರು.

ಇದಕ್ಕೆ ಕೆಲವು ಉದಾಹರಣೆಗಳನ್ನಷ್ಟೇ ಇಲ್ಲಿ ನೀಡಬಲ್ಲೆ. ಮೀನುಗಾರರ ಆದಾಯ ಹೆಚ್ಚಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ನೆರವು ನೀಡುವ “ಮತ್ಸ್ಯಸಿರಿ” ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದ ಅವರು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ ಜಾರಿ ಮಾಡುವ ಮೂಲಕ 2.97ಲಕ್ಷ ವಿದ್ಯಾರ್ಥಿಗಳಿಗೆ ರೂ.462.12 ಕೋಟಿ ವಿದ್ಯಾರ್ಥಿ ವೇತನ ನೀಡಿದ್ದೇವೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೈತ್ರಿ, ಮನಸ್ವಿನಿ, ವಿಕಲಚೇತನರ ಮಾಸಾಶನ ಹಾಗೂ ಆಸಿಡ್ ದಾಳಿ ಸಂತ್ರಸ್ತರ ಯೋಜನೆಗಳ ಪಿಂಚಣಿ ಮೊತ್ತ ಹೆಚ್ಚಳ ಮಾಡಿದ್ದೇವೆ. ಇದು 75ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ‌ ಎಂದರು.

ಶ್ರಮಿಕ ವರ್ಗದವರಿಗೆ ಕಾರ್ಮಿಕ ಇಲಾಖೆಯಿಂದ 100 ಹೈಟೆಕ್ ಸಂಚಾರಿ ಕ್ಲಿನಿಕ್ ತೆರಯಲಾಗಿದೆ. ಗೃಹಿಣಿ ಶಕ್ತಿ ಯೋಜನೆಯ ಮೂಲಕ ಕೋವಿಡ್ ಹಾಗೂ ನೆರೆ ಸಂತ್ರಸ್ಥ ಕುಟುಂಬಗಳ ಮಹಿಳಾ ಮುಖ್ಯಸ್ಥೆಗೆ ಸಹಯಾಧನ ನೀಡುವ ಯೋಜನೆ ರೂಪಿಸಿದ್ದೇವೆ ಎಂದು ಮಾಹಿತಿ ನೀಡಿದ ಅವರು, ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ಥೆಗೆ ನೀಡುವ ಪರಿಹಾರದ ಮೊತ್ತವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಿದ್ದು, ಮಾಶಾಸನವನ್ನು 3000 ರಿಂದ 10000ಕ್ಕೆ ಹೆಚ್ಚಿಸಿದೆ ಎಂದರು.

ಇದು ತಮ್ಮ ಮುಂದೆ ಇಡುತ್ತಿರುವ ಕೆಲವು ಉದಾಹರಣೆಗಳಷ್ಟೆ. ಪ್ರತೀ ಗ್ರಾಮದ ಬಡಕುಟುಂಬಗಳನ್ನು ಅವಲೋಕಿಸಿದರೆ ನಮ್ಮ ಯೋಜನೆಗಳ ಫಲದಿಂದಾಗಿ ಹಸನಾಗಿರುವ ಕುಟುಂಬಗಳ ಚಿತ್ರಣ ನಿಮಗೆ ಸಿಗಲಿದೆ ಎಂದ ಅವರು, ಈ ಸಮಾವೇಶಗಳು ಈ ಸರಕಾರದ ಯೋಜನೆಗಳ ಪ್ರಯೋಜನವನ್ನು ಪಡೆದ ಫಲಾನುಭವಿಗಳ ಸಂಖ್ಯೆಯ ಅನಾವರಣ. ಬದುಕಿಗೆ ಸ್ಫೂರ್ತಿಯಾಗಲಿರುವ ವೇದಿಕೆ, ಫಲಾನುಭವಿಗಳಿಂದ ಬದುಕು ಹಸನಾಗಿರುವ ಕುಟುಂಬಗಳ ಯಶೋಗಾಥೆಯ ಪ್ರದರ್ಶನ. ಸಾಮಾಜಿಕ ನ್ಯಾಯ, ಸಮಾನ ಅಭಿವೃದ್ಧಿ, ಬಡವರ ಬಗ್ಗೆ ಇರುವ ನೈಜ ಕಳಕಳಿಯಿಂದಾಗಿ ರೂಪಿತಗೊಂಡ ನಮ್ಮ ಅವಿರತ ಪ್ರಯತ್ನಗಳನ್ನು ನಾಡಿಗೆ ಹಾಗೂ ತಮಗೆ ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಎಂದರು.

ಮಾರ್ಚ್ 4ರಿಂದ 20ರವರೆಗೆ ಪ್ರತಿ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 4ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಆಯ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರ ಸಮ್ಮುಖದಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಫಲಾನುಭವಿಗಳೊಂದಿಗೆ ಮಾತನಾಡಲಾಗುತ್ತದೆ. ಯೋಜನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.

ಕೋಟ್ಯಾಂತರ ಜನರ ಬದುಕನ್ನು ಹಸನು ಮಾಡುವ ಕನಸನ್ನು ಹೊತ್ತು ಕಾರ್ಯನಿರ್ವಹಿಸುತ್ತಿರುವ ನಮಗೆ ನಿಮ್ಮ ಸಹಕಾರವೂ ಮುಂದೆಯೂ ಇರಲಿ ಎಂಬ ಆಶಯ ನಮ್ಮದು. ನೀವೂ ಸಮಾಜದ ಅಭಿವೃದ್ಧಿಯಲ್ಲಿ, ಬಡವರ ಕಲ್ಯಾಣದಲ್ಲಿ ನಮ್ಮೊಂದಿಗಿರುತ್ತೀರಿ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Related posts