ಬೆಂಗಳೂರು: ಒಂದೆಡೆ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ಸಾಧ್ಯತೆಗಳ ಬಗ್ಗೆ ರಾಜ್ಯ ರಾಜಕಾರಣದ ಒಂದು ಗುಂಪು ಕಾದು ಕುಳಿತಿದ್ದರೆ, ಇನ್ನೊಂದೆಡೆ ಸಂಪುಟ ವಿಸ್ತರಣೆಗೆ ಕಸರತ್ತು ಸಾಗಿದೆ.
ಭಾನುವಾರ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜಕೀಯ ಲೆಕ್ಕಾಚಾರದ ಸಮೀಕರಣ ಸೂತ್ರವನ್ನು ಯಡಿಯೂರಪ್ಪ ಮುಂದಿಟ್ಟಿದ್ದಾರೆ. ಸಧ್ಯವೇ ಲೋಕಸಭಾ ಉಪಚುನಾವಣೆ ನಡೆಯಲಿದೆ. ಜೊತೆಗೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಉಪಸಮರ ನಡೆಯಲಿದೆ. ಹಾಗಾಗಿ ಸಂಪುಟ ವಿಸ್ತರಣೆ ಮಾಡಿ ಅತೃಪ್ತರನ್ನು ಸಂತುಷ್ಟಗೊಳಿಸುವ ಅನಿವಾರ್ಯತೆಯನ್ನು ಬಿಎಸ್’ವೈ ಅವರು ಹೈಕಮಾಂಡ್ ಮುಂದೆ ಇತ್ತರೆನ್ನಲಾಗಿದೆ.
ಈ ಸಂಗತಿಗಳ ಬಗ್ಗೆ ಮುಂದೆ ನೋಡೋಣ ಎಂದು ಹೇಳಿ ಯಡಿಯೂರಪ್ಪ ಅವರನ್ನು ಕಳುಹಿಸಿಕೊಟ್ಟ ವರಿಷ್ಠರು, ಸಿಎಂ ಬೆಂಗಳೂರು ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ಕೆರೆ ಮಾಡಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆನ್ನಲಾಗಿದೆ.
ಈ ಕುರಿತಂತೆ ವಿಮಾನ ನಿಲ್ದಾಣದಲ್ಲೇ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಯಡಿಯೂರಪ್ಪ, ಆರೇಳು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಸುಳಿವು ನೀಡಿದರು.