ರಾಜ್ಯದ ರೈತರ ಹಿತಶಕ್ತಿ ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸುವುದು ರೈತದ್ರೋಹಿ ಕಾರ್ಯ

ಬೆಂಗಳೂರು: ರಾಜ್ಯದ ರೈತರ ಹಿತಶಕ್ತಿ ಬಲಿಕೊಟ್ಟು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದು ರೈತದ್ರೋಹಿ ಕಾರ್ಯ ಎಂದು ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಕಾವೇರಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ಬೆಳೆ ಬೆಳೆಯಲು ಸಂಪೂರ್ಣವಾಗಿ ನೀರುಹರಿಸಬೇಕೆಂದು ಒತ್ತಾಯಿಸಿದಾಗ ಮೈಸೂರಿನಲ್ಲಿ 14ನೇ ತಾರೀಕು ಪ್ರತಿಭಟನೆ ಮಾಡಿ ಅದೇ ದಿನ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆದಿದ್ದರು. ಸಭೆಯಲ್ಲಿ ನಾವು ತಮಿಳುನಾಡಿಗೆ ಬಿಡುವ ಬದಲು ರಾಜ್ಯದ ರೈತರ ಹಿತಾಸಕ್ತಿ ಕಾಪಾಡಿ ಎಂದು ವಿರೋಧ ವ್ಯಕ್ತಪಡಿಸಿದ್ದೇವೆ ಎಂದವರು ಹೇಳಿದ್ದಾರೆ.

ನಮ್ಮ ರೈತರ ಬಲಿಕೊಟ್ಟು ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ. ಕೂಡಲೇ ಕಾವೇರಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ಬೆಳೆ ಬೆಳೆಯಲು ನೀರು ಹರಿಸಬೇಕು. ಸರ್ಕಾರ ನಾಟಕೀಯವಾಗಿ ವರ್ತಿಸದೆ ರಾಜ್ಯದ ರೈತರ ಹಿತ ಕಾಪಾಡಬೇಕು. ಮಳೆ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಕಾವೇರಿ ಪ್ರಾಧಿಕಾರಕ್ಕೆ ಮನವಿ ಮಾಡಿ ರಾಜ್ಯದ ರೈತರ ಹಿತಶಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಒಂದು ರೀತಿ ಹೇಳಿಕೆ ಕೊಡುವುದು, ನೀರಾವರಿ ಸಚಿವರು ಮತ್ತೊಂದು ರೀತಿ ನಡೆದುಕೊಳ್ಳುವುದು ನಾಟಕೀಯ ವರ್ತನೆಯಾಗಿದೆ ಎಂದಿರುವ ಕುರುಬೂರು ಶಾಂತಕುಮಾರ್, ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ ಕಾವೇರಿ ಎಲ್ಲಾ ನಾಲೆಗಳಿಗೂ ಬೆಳೆ ಬೆಳೆಯಲು ನಿರುಹರಿಸುವ ನಿರ್ಧಾರ ಕೈಗೊಳ್ಳಿ. ಕಟ್ಟುನಿರು ಪದ್ಧತಿ ಬೇಕಾಗಿಲ್ಲ ವರ್ಷಕ್ಕೆ ಒಂದೇ ಬೆಳೆ ಬೆಳೆಯಲು ಈ ಭಾಗದಲ್ಲಿ ಅವಕಾಶವಿರುವುದು. ಅದನ್ನು ತಪ್ಪಿಸುವ ಕಾರ್ಯ ಸರ್ಕಾರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಕೂಡಲೇ ರಾಜ್ಯದ ರೈತರ ಹಿತ ಶಕ್ತಿ ಕಾಪಾಡಬೇಕು. ಇಲ್ಲದಿದ್ದರೆ ಕಾವೇರಿ ಅಚ್ಚು ಕಟ್ಟು ಭಾಗದ ರೈತರು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಇಂಥ ಸಂಕಷ್ಟಕಾಲದ ವೇಳೆಯಲ್ಲಿ ತಮಿಳುನಾಡಿಗೆ ಮೇಕೆದಾಟು ನಿರ್ಮಾಣದ ಅವಶ್ಯಕತೆ ಬಗ್ಗೆ ಹೇಳಬೇಕು. ಅವರ ಮನವೊಲಿಸಿ ಸಮುದ್ರಕ್ಕೆ ಹೆಚ್ಚುವರಿಯಾಗಿ ಹರಿಯುವ ನೀರನ ಉಳಿಸುವ ಬುದ್ಧಿವಂತಿಕೆಯನ್ನ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ತೋರಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರೂ ಆದ ಕುರುಬುರ್ ಶಾಂತಕುಮಾರ್ ಮಾಧ್ಯಮ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ

Related posts