ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಾ ಇದ್ದರೆ ಅದಕ್ಕೆ ನೇರ ಕಾರಣ ಕೇಂದ್ರ ಸರ್ಕಾರ..! ಕಾಂಗ್ರೆಸ್ ಆರೋಪ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಾ ಇದ್ದರೆ ಅದಕ್ಕೆ ನೇರ ಕಾರಣ ಕೇಂದ್ರ ಸರ್ಕಾರ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ವಿರೋಧ ಪಕ್ಷ ಜೀವಂತವಾಗಿದಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನೀರು ನಿಲ್ಲಸಬಹುದಿತ್ತು. ನಾವು 2008 ರಲ್ಲಿ ವಿರೋಧ ಪಕ್ಷದಲ್ಲಿ ಇದ್ದಾಗ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದಿತ್ತು. ಆಗ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಅವರ ಬಳಿ ಮಾತನಾಡಿ ವೈಮಾನಿಕ ಸಮೀಕ್ಷೆ ಮಾಡಿಸಿ, ಸ್ಥಳದಲ್ಲೇ 1200 ಕೋಟಿ ಹಣವನ್ನು ಬಿಡುಗಡೆ ಆಗುವಂತೆ ಮಾಡಿದ್ದೆವು ಎಂದು ತಿಳಿಸಿದರು.

ಕರ್ನಾಟಕದ 25 ಜನ ಎಂಪಿಗಳು ಬಿಜೆಪಿಯವರು. ಇದುವರೆಗೂ ಒಂದೇ ಒಂದು ಮಾತನ್ನು ಕಾವೇರಿ ನೀರಿನ ವಿಚಾರವಾಗಿ ಮಾತನಾಡಿಲ್ಲ. ರಾಜ್ಯದ ಬಗ್ಗೆ ಬದ್ದತೆ ಇಲ್ಲ ಬಿಜೆಪಿಯವರಿಗೆ ಎಂದು ಉಗ್ರಪ್ಪ ದೂರಿದರು.

ಜನತಾಪಕ್ಷದಿಂದ ಬಿಜೆಪಿಯವರು ಹೊರ ಬರಲು ಕಾರಣ ದ್ವಿಸದಸ್ಯತ್ವ. ಅಂದರೆ ಅವರುಗಳು ಆರ್ಎಸ್ಎಸ್ ಹಾಗೂ ಜನತಾ ಪಕ್ಷ ಎರಡೂ ಕಡೆ ಸದಸ್ಯತ್ವ ಹೊಂದಿದ್ದರು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಅದಕ್ಕೆ ಪಕ್ಷ ತೊರೆದು ಬೇರೆ ಪಕ್ಷ ಮಾಡಿಕೊಂಡರು. ಈಗ ಜನತಾ ಪಕ್ಷಕ್ಕೆ ಬದ್ದತೆಯೇ ಇಲ್ಲ. ಹಿರಿಯರಾದ ದೇವೆಗೌಡರಿಗೆ ಬದ್ದತೆ ಇದೆ, ಕುಮಾರಸ್ವಾಮಿ ಅವರಿಗೆ ಯಾವುದೇ ಸಿದ್ದಾಂತವಿಲ್ಲ. ದೇವೇಗೌಡರನ್ನು ಹೈಜಾಕ್ ಮಾಡಿ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ನಲ್ಲಿ “ಎಸ್” ತೆಗೆಯಬೇಕು.
ಬಿಜೆಪಿ- ಜೆಡಿಎಸ್ ಎರಡೂ ಒಡೆದ ಮನೆಗಳು. ಇಬ್ಬರೂ ಸೇರಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಗೆಲ್ಲದೇ ಇದ್ದ ಪಕ್ಷದಲ್ಲಿ ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತೀರಾ? 2019 ರಲ್ಲಿ ಪುಲ್ವಾಮಾ ಘಟನೆಯ ಬಗ್ಗೆ ಸುಳ್ಳು ಹೇಳಿಕೊಂಡು ಲೋಕಸಭಾ ಚುನಾವಣೆ ಗೆದ್ದರೆ ಹೊರತು ಬೇರೆ ಸಾಧನೆ ಇಲ್ಲ ಎಂದವರು ಹೇಳಿದರು.

ಬಿಜೆಪಿ- ಜೆಡಿಎಸ್ ಪಕ್ಷಗಳಿಗೆ ಅಧಿಕಾರದ ದಾಹ ಬಿಟ್ಟರೆ ಇನ್ನೇನು ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ದಿನದಿಂದ ದಿನಕ್ಕೆ ಹಿಂಬಾಲಕರು ಹೆಚ್ಚಾಗುತ್ತಿದ್ದಾರೆ. ಜೆಡಿಎಸ್ನವರು ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಜೊತೆ ಹೋಗಿದ್ದರು, ಈಗ ಅವರನ್ನು ಬಿಟ್ಟುಬಿಟ್ಟಿದ್ದಾರೆ. ದೇವೆಗೌಡರು ಜೀವನದ ಉದ್ದಕ್ಕೂ ಬಿಜೆಪಿ ಸಿದ್ದಾಂತದ ವಿರುದ್ದ ಇದ್ದವರು ಈಗ ಇಳಿವಯಸ್ಸಿನಲ್ಲಿ ಇಂತಹ ಸ್ಥಿತಿಗೆ ಬಂದರಲ್ಲ ಎನ್ನುವ ನೋವಿದೆ. ಜೆಡಿಎಸ್ ನವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿರುದ್ದ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದ ಅವರು, ಈ ದೇಶದಲ್ಲಿ ಮತೀಯ ಶಕ್ತಿಗಳನ್ನು ಓಡಿಸಿ ಮತ್ತೆ ಶಾಂತಿ, ಸೌಹಾರ್ದಯುತ ಸಮಾಜವನ್ನು ನಿರ್ಮಾಣ ಮಾಡುವುದೇ ಕಾಂಗ್ರೆಸ್ ಪಕ್ಷದ ಗುರಿ. ರಾಜ್ಯದಲ್ಲಿ ಯಾರೇ ಒಂದಾದರೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ. ನಾವು ಕನಿಷ್ಟ 20 ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮ ಜನಪರ ಯೋಜನೆಗಳಿಂದ ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದೇವೆ ಎಂದು ತಿಳಿಸಿದರು.

Related posts