ಆಶಾ–ಅಂಗನವಾಡಿ ನೌಕರರ ಬೇಡಿಕೆಗಳಿಗೆ ಕೇಂದ್ರದಿಂದ ಹಸಿರು ನಿಶಾನೆ

ನವದೆಹಲಿ: ಆರೋಗ್ಯ ಹಾಗೂ ಮಕ್ಕಳ ಪೋಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಮತ್ತು ಅಕ್ಷರ ದಾಸೋಹಿ ನೌಕರರ ಬಹುಕಾಲದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸಿದೆ. ಕೇಂದ್ರ ಸಚಿವರಾದ ಅನ್ನಪೂರ್ಣಾ ದೇವಿ ಮತ್ತು ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ಮಹತ್ವದ ಮಾತುಕತೆ ನಡೆಸಿದರು.

ಹೋರಾಟ ನಿರತ ನೌಕರರನ್ನು ನವದೆಹಲಿಗೆ ಕರೆಸಿಕೊಂಡ ಕುಮಾರಸ್ವಾಮಿ, ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಶಾಸ್ತ್ರಿ ಭವನ ಕಚೇರಿಗೆ ಕರೆದುಕೊಂಡು ಹೋಗಿ, ಸಚಿವೆ ಅನ್ನಪೂರ್ಣಾ ದೇವಿ ಅವರನ್ನು ಭೇಟಿ ಮಾಡಿಸಿದರು. ಕರ್ನಾಟಕದ 12 ಮಂದಿ ನೌಕರರ ನಿಯೋಗ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮುಖ್ಯ ಬೇಡಿಕೆಗಳ ಚರ್ಚೆ: ಚರ್ಚೆಯಲ್ಲಿ ಎಫ್‌ಆರ್‌ಎಸ್ ನೀತಿ ಪರಿಷ್ಕರಣೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಚುನಾವಣಾ ಕರ್ತವ್ಯದಿಂದ ವಿನಾಯಿತಿ, ವಿಮಾ ಸೌಲಭ್ಯ, ವೇತನ ಹೆಚ್ಚಳ—ಇತ್ಯಾದಿ ಹಲವು ಸಮಸ್ಯೆಗಳು ಪ್ರಸ್ತಾಪಗೊಂಡವು.

ಸಮಸ್ಯೆಯನ್ನು ಆಲಿಸಿದ ಸಚಿವೆ ಅನ್ನಪೂರ್ಣಾ ದೇವಿ, “ಚುನಾವಣಾ ಕರ್ತವ್ಯ ಕುರಿತ ಸಮಸ್ಯೆಯನ್ನು ಚುನಾವಣಾ ಆಯೋಗದೊಂದಿಗೆ ಚರ್ಚಿಸಲಾಗುತ್ತದೆ. ನೌಕರರ ಮೇಲಿನ ಒತ್ತಡ ಕಡಿಮೆ ಮಾಡುವ ಕ್ರಮ ಕೈಗೊಳ್ಳಲಾಗುವುದು. ಮಾನವೀಯ ನೆಲೆಗಟ್ಟಿನಲ್ಲಿ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತದೆ” ಎಂದು ಭರವಸೆ ನೀಡಿದರು.

“ನರೇಂದ್ರ ಮೋದಿ ಸರ್ಕಾರ ನಿಮ್ಮ ಹಿಂದೆ ನಿಂತಿದೆ. ನೀವು ಶ್ರೇಷ್ಠ ಕೆಲಸ ಮಾಡುತ್ತಿದ್ದೀರಿ. ಸಾಧ್ಯವಾದಷ್ಟು ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದವರು ತಿಳಿಸಿದರು.

ಸಭೆಗೆ ಮುನ್ನ ತನ್ನ ನಿವಾಸದಲ್ಲಿ ನಿಯೋಗವನ್ನು ಭೇಟಿಯಾದ ಕುಮಾರಸ್ವಾಮಿ, “ತೀವ್ರ ಚಳಿಯಲ್ಲಿ ರಸ್ತೆ ಮೇಲೆ ಧರಣಿ ನಡೆಸಿದ್ದನ್ನು ನೋಡಿ ನೋವಾಯಿತು. ಪ್ರತಿಭಟನೆಯಿಗಿಂತ ಚರ್ಚೆಯೇ ಉತ್ತಮ ಮಾರ್ಗ” ಎಂದು ಹೇಳಿದರು.

ಇದೇ ವೇಳೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿ, ನೌಕರರ ನಿಯೋಗವನ್ನು ಅವರ ನಿವಾಸಕ್ಕೆ ಕಳುಹಿಸಿದರು. ಪ್ರಧಾನ್ ಅವರ ಜತೆಗೂ ನಿಯೋಗವು ಬೇಡಿಕೆಗಳನ್ನು ವಿವರಿಸಿತು.

ಎಸ್. ವರಲಕ್ಷ್ಮೀ, ಹೆಚ್.ಎಸ್. ಸುನಂದಾ, ಮಾಲಿನಿ ಮೇಸ್ತಾ, ಶಾಂತಾ, ಲಕ್ಷ್ಮೀದೇವಮ್ಮ, ಮಹದೇವಮ್ಮ, ಶಶಿಕಲಾ, ದೊಡ್ಡವ್ವ ಪೂಜಾರಿ, ನಂಜಮ್ಮ, ಗುಲ್ಜಾರ್, ಉಷಾರಾಣಿ, ಸಿಂಧು, ಸವಿತಾ ಮೊದಲಾದವರು ನಿಯೋಗದಲ್ಲಿದ್ದರು.

Related posts