ಬೆಂಗಳೂರು: ನಾಲ್ಕು ತಿಂಗಳ ಪರಿಶ್ರಮದಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಕೋವಿಡ್ ರೋಗಿಗಳಿಗೆ ಸುಸಜ್ಜಿತ ಆಸ್ಪತ್ರೆ ಲಭ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಬಿಬಿಎಂಪಿಯಿಂದ ನಿರ್ಮಾಣವಾದ ‘ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಬಿಬಿಎಂಪಿಯ ಕಟ್ಟಡ ನಾಲ್ಕು ವರ್ಷಗಳಿಂದ ಖಾಲಿ ಇತ್ತು. ಇಂತಹ ಸಂದರ್ಭದಲ್ಲಿ 20-25 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುವ ಆಲೋಚನೆ ಬಂದಿತ್ತು. ಆದರೆ ಕೋವಿಡ್ ಸಂಕಷ್ಟವಿದ್ದ ಹಿನ್ನೆಲೆಯಲ್ಲಿ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರನ್ನು ಮನವಿ ಮಾಡಿದ್ದೆ. ಅವರು ತಕ್ಷಣ ಸ್ಪಂದಿಸಿ 11 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ನೀಡಿದರು. ವಿಪ್ರೊ ಸಂಸ್ಥೆಯವರು ವೈದ್ಯ ಸಿಬ್ಬಂದಿಯನ್ನು ನಿಯೋಜಿಸಿದರು. ಈ ಸಂಸ್ಥೆಗಳ ನೆರವಿನಿಂದಾಗಿ ಸರ್ಕಾರದ ಮೇಲೆ ಹೊರೆ ಇಲ್ಲದೆ ಆಸ್ಪತ್ರೆ ನಿರ್ಮಾಣವಾಗಿದೆ. ಈ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಸತಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.
ಚರಕ ಆಸ್ಪತ್ರೆ
ಆಸ್ಪತ್ರೆಯಲ್ಲಿ ಪುರುಷರಿಗೆ 60, ಮಹಿಳೆಯರಿಗೆ 50 ಹಾಗೂ ಮಕ್ಕಳಿಗೆ 20 ಸೇರಿದಂತೆ ಒಟ್ಟು 130 ಹಾಸಿಗೆಗಳಿವೆ. 20 ಐಸಿಯು ಹಾಸಿಗೆ, 20 ವೆಂಟಿಲೇಟರ್ ಸೌಲಭ್ಯವಿದೆ.