ಬೆಂಗಳೂರು: ಸಾವಿರಾರು ಕೋಟಿ ರೂ ಮೌಲ್ಯದ ಜಮೀನನ್ನು ಅಧಿಕಾರಿಗಳು ಮುಖ್ಯಮಂತ್ರಿ ಸಹಿ ಫೋರ್ಜರಿ ಮೂಲಕ ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಸಿಬಿಐ ತನಿಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಸಿಟಿಜನ್ ರೈಟ್ಸ್ ಫೌಂಡೇಶನ್ ರಾಜ್ಯಪಾಲರಿಗೆ ದೂರು ನೀಡಿದೆ.
ಸಾರ್ವಜನಿರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ, ಜನರ ಹಿತಾಸಕ್ತಿ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಇದೀಗ ರಾಜ್ಯ ಸರ್ಕಾರದ ಅಧಿಕಾರಿಗಳು ಮುಖ್ಯಮಂತ್ರಿಯ ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂಬ ಆರೋಪ ಕುರಿತಂತೆ ತಮ್ಮ ಗಮನಸೆಳೆಯಲು ಬಯಸಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ನಿರ್ದೇಶಿಸಲು ಕೋರಿ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ಸ್’ಗೆ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿರುವ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣದಲ್ಲಿ ತಮ್ಮ ತಪ್ಪಿಲ್ಲ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ 22.08.2024ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ ರವರು, ಸದರಿ ಕಡತಗಳಲ್ಲಿ ತಾವು ಸಹಿ ಮಾಡಿಲ್ಲ, ಅಧಿಕಾರಿಗಳೇ ತಮ್ಮ ಸಹಿ ಮಾಡಿರಬೇಕು ಎಂದು ಸಂಶಯ ವ್ಯಕ್ತಪಡಿಸಿರುತ್ತಾರೆ ಎಂಬುದಾಗಿ ಮಾಧ್ಯಮಗಳು ವರದಿಯನ್ನು ಪ್ರಕಟಿಸಿವೆ.
ಕುಮಾರಸ್ವಾಮಿ ಅವರದ್ದು ಎನ್ನಲಾದ ಸಹಿಯು ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರದ್ದು ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದು, ಈ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕಡತದ ಪುಟಗಳಲ್ಲಿನ ಕೈ ಬರವಣಿಗೆ, ಸಹಿಯು ತಮ್ಮದಲ್ಲ, ಮತ್ತು ಅದನ್ನು ಪೋರ್ಜರಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಅದೇ ಕಡತದ ಪುಟಗಳಲ್ಲಿನ ಕೈ ಬರವಣಿಗೆಯು ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರೇರಾದ ಹಾಲಿ ಅಧ್ಯಕ್ಷ ರಾಕೇಶ್ ಸಿಂಗ್ ಅವರದ್ದು ಎಂದು ರಾಜ್ಯಪಾಲರು ಮತ್ತು ಲೋಕಾಯುಕ್ತರಿಗೆ ದೂರರ್ಜಿ ಸಲ್ಲಿಕೆಯಾಗಿದೆ ಎಂದು ಮಾಧ್ಯಮಗಳು ಪ್ರಕಟಿಸಿರುತ್ತದೆ. ಈ ವರದಿ ಬೆನ್ನಲೇ ‘ಸಿಟಿಜನ್ ರೈಟ್ಸ್ ಫೌಂಡೇಶನ್’ (‘Citizen Rights Foundation’) ಅಧ್ಯಕ್ಷ ಕೆ.ಎ.ಪಾಲ್ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿ ಒಟ್ಟಾರೆ ಪ್ರಕರಣಕ್ಕೆ ರೋಚಕತೆ ತುಂಬಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಎಂಬವರು ರಾಜ್ಯಪಾಲರಿಗೆ ಮತ್ತು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದ ಟಿಪ್ಪಣಿ ಹಾಳೆಯಲ್ಲಿನ ಕೈ ಬರವಣಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ಸಿಂಗ್ ಅವರ ಕೈ ಬರವಣಿಗೆಯನ್ನು ಹೋಲಿಕೆ ಮಾಡಿ ವಿವರಿಸಿರುವುದು ಗೊತ್ತಾಗಿದೆ ಎಂದು ಆ ದೂರಿನಲ್ಲಿಉಲ್ಲೇಖಿಸಲಾಗಿದೆ.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಕೇಶ್ ಸಿಂಗ್ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲೇ ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದಲ್ಲಿ ಕುಮಾರಸ್ವಾಮಿ ಅವರ ಸಹಿ ಮತ್ತು ಕೈ ಬರವಣಿಗೆಯನ್ನು ತಿದ್ದಲಾಗಿದೆ ಎಂದು ದೂರರ್ಜಿಯಲ್ಲಿ ಆಪಾದಿಸಲಾಗಿದೆ ಎಂದೂ, ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿ ಗುತ್ತಿಗೆ ಮಂಜೂರಾತಿಯ ಕಡತದಲ್ಲಿನ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆಯು, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಅವರ ಕೈ ಬರವಣಿಗೆಯೊಂದಿಗೆ ಹೋಲುತ್ತದೆ ಮತ್ತು ಅದಕ್ಕೆ ಸಾಮಿಪ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಪುರಾವೆಗಳನ್ನು ಒದಗಿಸಿರುವುದು ಗೊತ್ತಾಗಿದೆ ಎಂದೂ ಮಾಧ್ಯಮ ವರದಿ ಉಲ್ಲೇಖಿಸಿವೆ.
ಈ ನಡುವೆ, ಹೆಚ್.ಡಿ.ಕುಮಾರಸ್ವಾಮಿಯವರು ಕೂಡಾ ‘ಸಾಯಿ ವೆಂಕಟೇಶ್ವರ ಮಿನರಲ್ಸ್ ಲಿಮಿಟೆಡ್‌ಗೆ 550 ಎಕರೆ ಮಂಜೂರು ಮಾಡುವಂತೆ ನಾನು ಯಾವ ಕಡತದ ಮೇಲೂ ಬರೆದಿಲ್ಲ. ಅದು ನನ್ನ ಸಹಿಯೇ ಅಲ್ಲ’ ಎಂದು 22.08.2024ರಂದು ಮಾಧ್ಯಮಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ‘ನಾನು ಯಾವುದೇ ತಪ್ಪು ಮಾಡಿಲ್ಲ. ಅಧಿಕಾರಿಗಳೇ ಹಾಗೆ ಬರೆದುಕೊಂಡು, ನನ್ನ ಸಹಿ ಹಾಕಿಕೊಂಡಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಈ ಆರೋಪಗಳ ಕುರಿತು ದೂರು ಸಲ್ಲಿಕೆಯಾದರೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತುಮಕೂರಿನಲ್ಲಿ ಪ್ರತಿಕ್ರಿಸಿದ್ದರು. ಆದರೆ ರಾಜ್ಯ ಸರ್ಕಾರವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬಹುದಾದರೂ ಈ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದೆ ಎಂದು ರಾಜ್ಯಪಾಲರ ಗಮನಸೆಳೆದಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಅಧ್ಯಕ್ಷ ಕೆ.ಎ.ಪಾಲ್, ಅಕ್ರಮದಿಂದಾಗಿ ಸರ್ಕಾರಕ್ಕೆ ಬಹುಕೋಟಿ ರೂಪಾಯಿ ನಷ್ಟವಾಗಿದೆ. ಅಧಿಕಾರಿಗಳಿಂದ ಫೋರ್ಜರಿ ನಡೆದಿದೆ ಎಂಬುದೂ ಗಂಭೀರ ಆರೋಪವಾಗಿದ್ದು ಈ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಲು ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.