ದೆಹಲಿ: ಕೊರೋನಾ ಕಾರಣಕ್ಕಾಗಿ ದೇಶದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಏಪ್ರಿಲ್ 14ರಂದು ಕೊನೆಗೊಳ್ಳುತ್ತಾ? ಏಪ್ರಿಲ್ ಅಂತ್ಯದವರೆಗೂ ಮುಂದುವರಿಯುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಹರಿದಾಡುತ್ತಿವೆ. ಆದರೆ ಇದು ನಿಜಾನಾ? ಮೋದಿ ಸರ್ಕಾರ ಇಂತಹ ಕಠೋರ ನಿರ್ಧಾರ ಕೈಗೊಳ್ಳಲಿದೆಯಾ ಎಂದೆಲ್ಲಾ ಮಾತುಗಳೂ ಕೇಳಿಬರುತ್ತಿವೆ
ಕೊರೋನಾ ವೈರಾಣು ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವುದಷ್ಟೇ ಅಲ್ಲ, ಅಮೆರಿಕಾ, ಇಟಲಿ, ಸ್ಪೇನ್ ಸಹಿತ ಐರೋಪ್ಯ ರಾಷ್ಟ್ರಗಳನ್ನೂ ಸ್ಮಶಾನ ಸದೃಶವಾಗಿಸಿವೆ. ಸಾವುಗಳ ಸರಣಿಯಿಂದ ನಲುಗಿರುವ ಅಮೆರಿಕಾ ಈಗಾಗಲೇ ಏಪ್ರಿಲ್ ಅಂತ್ಯದವರೆಗೂ ಸೋಶಿಯಲ್ ಡಿಸ್ಟಾನ್ಸ್ ವಿಸ್ತರಿಸಿದೆ. ಹಾಗಾಗಿ ಭಾರತದಲ್ಲೂ ಕೋವಿಡ್-19 ಹರಡುವಿಕೆ ನಿಯಂತ್ರಣಕ್ಕೆ ಅಮೆರಿಕಾ ರೀತಿಯ ನಿರ್ಧಾರ ಕೈಗೊಳ್ಳಬಹುದೆಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
ಇದನ್ನೂ ಓದಿ.. ಒಂದು ತಿಂಗಳ ಕಾಲ ಮನೆ ಬಾಡಿಗೆ ವಿನಾಯಿತಿ ; ಕೇಂದ್ರದ ಸೂಚನೆ
ಲಾಕ್ ಡೌನ್ ವಿಸ್ತರಣೆ ಇಲ್ಲ
ಅಂತೆಕಂತೆಗಳಿಗೆ ಕೇಂದ್ರ ಸರ್ಕಾರ ಇಂದು ಉತ್ತರ ನೀಡಿದೆ. 21 ದಿನಗಳ ಲಾಕ್ ಡೌನ್ ನ್ನು ವಿಸ್ತರಿಸುವ ಯಾವುದೇ ಚಿಂತನೆಗಳಿಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಅವಧಿಯನ್ನು ವಿಸ್ತರಿಸುವುದಿಲ್ಲ. ಈ ಬಗ್ಗೆ ಸುದ್ದಿಗಳು ಹರಿದಾಡಿದ್ದರೆ ಅದು ಸುಳ್ಳು ವದಂತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೆ ವೇಳೆ ಕೇಂದ್ರ ವಾರ್ತಾ ಇಲಾಖೆ ಕೂಡಾ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಸ್ಪಷ್ಟನೆ ನೀಡಿದೆ. ಪ್ರೆಸ್ ಇಂಫಾರ್ಮೇಶನ್ ಬ್ಯುರೋ ಈ ಬಗ್ಗೆ ಟ್ವೀಟ್ ಮಾಡಿದ್ದು ಲಾಕ್ ಡೌನ್ ವಿಸ್ತರಣೆಯಾಗಲಿದೆ ಎಂಬ ಕೆಲ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದುದು. ಅಂತಹಾ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.