JDSನಲ್ಲಿ ಕ್ಷಿಪ್ರ ಬೆಳವಣಿಗೆ; ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಜಾ

ಬೆಂಗಳೂರು: ಬಿಜೆಪಿ ನೇತೃತ್ವದ NDA ಜೊತೆ ಜೆಡಿಎಸ್ ಮೈತ್ರಿ ಕುರಿತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿ.ಎಂ.ಇಬ್ರಾಹಿಂ ಅವರಿಗೆ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಶಾಕ್ ನೀಡಿದ್ದಾರೆ. ಅಚ್ಚರಿಯ ತೀರ್ಮಾನವೊಂದರಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ.

ಕೆಲವು ದಿನಗಳಿಂದ ಮಾಜಿ ಸಿಎಂ ಬಗ್ಗೆ ಟೀಕೆ ಮಾಡುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಡೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಸ್ವಪಕ್ಷದ ವರಿಷ್ಠರ ವಿರುದ್ಧವೇ ಇಬ್ರಾಹಿಂ ಗುಡುಗಿದ್ದರು. ಈ ಸಂದರ್ಭದಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನು ವಜಾ ಮಾಡಿ, ಅವರ ಸಾರಥ್ಯದ ಸಮಿತಿಯನ್ನು ವಿಸರ್ಜಿಸುವ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಹೆಚ್.ಡಿ.ದೇವೇಗೌಡರು ಪ್ರಕಟಿಸಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಗುರುವಾರ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡ ಈ ನಿರ್ಧಾರ ಕುರಿತಂತೆ ಸುದ್ದಿಗಾರಿಗೆ ವಿವರ ಒದಗಿಸಿದ ಹೆಚ್.ಡಿ. ದೇವೇಗೌಡರು, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ಪ್ರಸ್ತಾಪ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದರು. ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಅವರನ್ನು ವಜಾ ಮಾಡಲಾಗಿದೆ ಎಂದು ತಿಳಿಸಿದರು. ನೂತನ ಅಧ್ಯಕ್ಷರಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ದೇವೇಗೌಡರು ನೇಮಕ ಮಾಡಿದ್ದಾರೆ.

Related posts