ಉದಯಗಿರಿ ಗಲಭೆಯಲ್ಲಿ ಕಲ್ಲುತೂರಿದವರನ್ನು ಮಾತ್ರವಲ್ಲ, ಪ್ರಚೋದಿಸಿದವರನ್ನೂ ಬಂಧಿಸಿ; ಸಿಎಂ ತಾಕೀತು

ಮೈಸೂರು: ಉದಯಗಿರಿ ಗಲಭೆಯಲ್ಲಿ ಕಲ್ಲುತೂರಿದವರನ್ನು ಮಾತ್ರವಲ್ಲ, ಪ್ರಚೋದಿಸಿದವರನ್ನೂ ಬಂಧಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಮ್, ಉದಯಗಿರಿ ಘಟನೆಗೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಮೈಸೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.

ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಕೈಗೆತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ತಕ್ಕ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಅದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು, ಇದರ ಜೊತೆಗೆ ತಪ್ಪು ಮಾಡದವರಿಗೆ ಕೂಡ ತೊಂದರೆ ಆಗಬಾರದು ಎಂದವರು ಪ್ರತಿಪಾದಿಸಿದ್ದಾರೆ.

ಮುಂದೆ ಇಂಥಾ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿರುವುದಾಗಿ ಸಿಎಂ ತಿಳಿಸಿದ್ದಾರೆ.

Related posts