ಬೊಮ್ಮಾಯಿ ವಿರುದ್ಧ ಬಿಜೆಪಿಯ ಸುಮಾರು 30 ಶಾಸಕರು ವರಿಷ್ಠರಿಗೆ ದೂರು; ರಮೇಶ್ ಬಾಬು

ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವಂತೆಯೇ ಆಡಳಿತಾರೂಢ ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಬಿಜೆಪಿಯ ಸುಮಾರು 30 ಶಾಸಕರು ವರಿಷ್ಠರಿಗೆ ದೂರು ನೀಡಿದ್ದಾರೆಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹಾಗೂ ವಕ್ತಾರ ಲಕ್ಷ್ಮಣ್ ಅವರು ಬೆಂಗಳೂರಿನಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿ ಕುತೂಹಲದ ಕೇಂದ್ರಬಿಂದುವಾಯಿತು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟ ನಾಯಕರು, ಹಲವಾರು ಹಗರಣಗಳ ಬಗ್ಗೆಯೂ ಆರೋಪ ಮಾಡಿದರು.

ಬಿಜೆಪಿಯಲ್ಲೇ ಭಿನ್ನಮತದ ಭುಗಿಲು..

ಮಾಜಿ ಶಾಸಕ ರಮೇಶ್ ಬಾಬು ಮಾತನಾಡಿ, ಯಡಿಯೂರಪ್ಪನವರು ಇಷ್ಟು ದಿನ ಬಿಜೆಪಿ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಸಂಬಂಧದ ಬಗ್ಗೆ ಮಾತನಾಡುತ್ತಿದ್ದರು. ಪ್ರಜಾಧ್ವನಿ ಯಾತ್ರೆ ನಂತರ ಸುಮ್ಮನಾಗಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಯಡಿಯೂರಪ್ಪ ಬೊಮ್ಮಾಯಿ ಅವರು ನಾನೊಂದು ತೀರಾ ನೀನೊಂದು ತೀರದಂತಾಗಿದ್ದಾರೆ. ದೆಹಲಿಯ ಕಾರ್ಯಕಾರಣಿ ಸಭೆ ಸಮಯದಲ್ಲಿ 30 ಶಾಸಕರು ಸಹಿ ಮಾಡಿ ಬೊಮ್ಮಾಯಿ ಅವರ ನಾಯಕತ್ವ ಬದಲಾಗಬೇಕು ಎಂದು ಪತ್ರ ಬರೆದಿದ್ದಾರೆ. ಇದನ್ನು ಬರೆದಿರುವವರು ಯಡಿಯೂರಪ್ಪನವರ ಬೆಂಬಲಿಗರು ಎಂದು ರಮೇಶ್ ಬಾಬು ಅವರು ಕಮಲ ಪಾಳಯದ ಬೆಳವಣಿಗೆ ಬಗ್ಗೆ ಬೊಟ್ಟು ಮಾಡಿದರು.

ಯಡಿಯೂರಪ್ಪ ಅವರು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಸಿದ್ಧರಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮುಗಿಲು ಮುಟ್ಟಿದೆ. ಇದೇ ಕಾರಣಕ್ಕೆ ಅಮಿತ್ ಶಾ ಅವರು ಮಂಡ್ಯಕ್ಕೆ ಬಂದಾಗ ಯಡಿಯೂರಪ್ಪ ತಪ್ಪಿಸಿಕೊಂಡರು. ನಳೀನ್ ಕುಮಾರ್, ಸಿ.ಟಿ ರವಿ ಅವರದು ಒಂದು ತಂಡ, ಯತ್ನಾಳ್ ಅವರದು ಮತ್ತೊಂದು ತಂಡ, ಬೊಮ್ಮಾಯಿ ಅವರದು, ಯಡಿಯೂರಪ್ಪನವರದ್ದು ಮತ್ತೊಂದು ತಂಡವಾಗಿದೆ. ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ನಾಯಕರ ಜತೆ ವ್ಯವಹಾರ ಮಾಡಲು ಸಮಯ ಸಾಲುತ್ತಿಲ್ಲ ಎಂದು ರಮೇಶ್ ಬಾಬು ಟೀಕಿಸಿದರು. 

ಬೆಂಗಳೂರಿನಲ್ಲಿ ಐದಾರು ಮಂತ್ರಿಗಳ ಗುದ್ದಾಟದ ಮಧ್ಯೆ ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ. ಆರ್.ಅಶೋಕ್ ಕಂದಾಯ ಸಚಿವರ ಕ್ಷೇತ್ರ ಪದ್ಮನಾಭನಗರದಲ್ಲಿ 8 ವಾರ್ಡ್ ಗಳು ಬರುತ್ತವೆ. ಈ ಕ್ಷೇತ್ರದಲ್ಲಿ ಯಾವ ರೀತಿ ಬಿಬಿಎಂಪಿ ಕಾಮಗಾರಿಗಳ ಅವ್ಯವಹಾರ ನಡೆಯುತ್ತಿವೆ. ಅಶೋಕ್ ಅವರು ತಮ್ಮ ಕ್ಷೇತ್ರದಲ್ಲಿನ ಅವ್ಯವಹಾರದ ಬಗ್ಗೆ ತಿನಿಖೆಗೆ ಸಹಕಾರ ನೀಡುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದರು.

ಅಶೋಕ್ ಗರಡಿಯಲ್ಲಿ ಹಗರಣಗಳ ಸಾಲು..?

  • ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ 400 ಕೋಟಿಗೂ ಹೆಚ್ಚು ಕಾಮಗಾರಿ ನಡೆದಿವೆ.

  • ಒಬ್ಬ ವ್ಯಕ್ತಿಯ ಪ್ರಭಾವಕ್ಕೆ ಒಳಗಾಗಿ ಎಲ್ಲ ಕಾಮಗಾರಿ ಅಕ್ರಮವಾಗಿ ಹಂಚಿಕೆಯಾಗಿದೆ.

  • ಒಂದೇ ಸಮುದಾಯ ಭವನ ರಿಪೇರಿಗೆ 8 ಬಾರಿ ಖರ್ಚು ಮಾಡಿದ್ದಾರೆ.

  • ಯಡಿಯೂರು ಮೈದಾನದಲ್ಲಿ ನಾಲ್ಕು ಕಾಮಗಾರಿ ಹೆಸರಲ್ಲಿ 4 ಕೋಟಿ ವೆಚ್ಚವಾಗಿವೆ.

  • ಬಿಬಿಎಂಪಿ ಕಚೇರಿ 8 ಬಾರಿ ಕಾಮಗಾರಿ ಮಾಡಿ 1.22 ಕೋಟಿ ವೆಚ್ಚ ಮಾಡಿದ್ದಾರೆ.

  • ಸೌತ್ ಎಂಡ್ ಗಡಿಯಾರ ಕಾಮಗಾರಿಗೆ 3.21 ಕೋಟಿ ಹಣಕ್ಕೆ 10 ಬಾರಿ ಬಿಲ್ ಮಾಡಿದ್ದಾರೆ.

  • ಯಡಿಯೂರು ಮಾರುಕಟ್ಟೆಯಲ್ಲಿ 5 ವರ್ಷಗಳಲ್ಲಿ 10 ಬಾರಿ ಕಾಮಗಾರಿ ಮಾಡಿ 5 ಕೋಟಿ ಖರ್ಚು ಮಾಡಿದ್ದಾರೆ.

ಈ ರೀತಿ 500 ಕೋಟಿ ರೂಪಾಯಿ ಕಾಮಗಾರಿ ಇದೊಂದು ವಾರ್ಡ್‌ನಲ್ಲಿ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಮೇಶ್ ಬಾಬು, ಇನ್ನೂ 8 ವಾರ್ಡ್‌ಗಳ ಮಾಹಿತಿಯನ್ನು ಕೇಳಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು. ಅಶೋಕ್ ಅವರು ಪದ್ಮನಾಭನಗರ, ಬೆಂಗಳೂರು ರಾಜ್ಯದ ಹಿತದೃಷ್ಟಿಯಿಂದ ನಿಮ್ಮ ಕ್ಷೇತ್ರದ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶ ನೀಡಲಿ ಎಂದು ಆಗ್ರಹಿಸಿದರು.

ಕಳೆದ ಒಂದುವಾರದ ಹಿಂದೆ ಚಿತ್ರದಪರ್ಗದ ಚಳ್ಳಕೆರೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ್ ಕಾಂಗ್ರೆಸ್ ಶಾಸಕ ರಘುಮೂರ್ತಿ ಅವರ ಮೇಲೆ ನಿಂದನೆ ಮಾಡಿ ಸಭೆ ಬಹಿಷ್ಕರಿಸಿ ಸಭೆಯಿಂದ ಹೋಗುತ್ತಾರೆ. ಅವರು ಬೆಂಗಳೂರಿನಲ್ಲಿ ಕಲಸ ಮಾಡಿದ್ದು, ಅಕ್ರಮ ನಡೆಸಿದ ಸಂಬಂಧ ದಾಳಿ ನಡೆದಿದೆ. ಅವರ ಮೇಲೆ ಆರೋಪವಿದ್ದರೂ ಈ ಸರ್ಕಾರ ಮತ್ತೆ ಅವರಿಗೆ ಮತ್ತೆ ಅಧಿಕಾರ ನೀಡಿದ್ದು ಯಾಕೆ? ಸೊರಬದಲ್ಲಿ 16 ತಹಶೀಲ್ದಾರ್ ವರ್ಗಾವಣೆಯಾಗಿದ್ದು, ಇದೊಂದು ದಂಧೆಯಾಗಿದೆ ಎಂದು ದೂರಿದರು.

ಬಿಜೆಪಿ ಸರ್ಕಾರ ಬಂದ ನಂತರ ಕ್ಲಾಸ್ 1 ಹುದ್ದೆ ತುಂಬುತ್ತಿಲ್ಲ. ರಾಜ್ಯದಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿರುವವರಲ್ಲಿ ಶೇ.50ರಷ್ಟು ಬಡ್ತಿ ಮೂಲಕ ಹುದ್ದೆಗೆ ಬಂದಿದ್ದರೆ, ಉಳಿದವರು ಆರೋಪ ಹೊತ್ತಿರುವವರನ್ನು ಕಂದಾಯ ಇಲಾಖೆ ಮೂಲಕ ತಹಶೀಲ್ದಾರ್ ಹುದ್ದೆ ನೀಡಿ ದಂಧೆ ಮಾಡುತ್ತಿದೆ. ಬಿಜೆಪಿ ಕಾರ್ಯಾಂಗದ ಶೈಲಿಯನ್ನು ಹಣದ ಆಸೆಗೆ ಕಲುಶಿತ ಮಾಡಬೇಡಿ. ಚಳ್ಳಕೆರೆ ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕು. ಇದರಲ್ಲಿ ಶ್ರೀರಾಮುಲು, ಆರ್.ಅಶೋಕ್ ಅವರು ಭಾಗಿಯಾಗಿದ್ದಾರೆ ಎಂದು ರಮೇಶ್ ಬಾಬು ಆರೋಪಿಸಿದರು.

Related posts