ಕೊರೋನಾ ತಲ್ಲಣ; 90,000 ದಾಟಿದ ಸೋಂಕಿತರ ಸಂಖ್ಯೆ
-ದೆಹಲಿ: ಕೊರೋನಾ ವೈರಸ್ ದೇಶದ ಮೇಲೆ ಗಂಭೀರ ಪರಿಣಾಮ ಬೀರಿದ್ದು ಆರ್ಥಿಕ ವ್ಯವಸ್ಥೆಗೆ ಗಂಡಾಂತರಕಾರಿಯೆನಿಸಿದೆ. ಈ ಬಗ್ಗೆ ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ. ಲಾಕ್ ಡೌನ್ 3ನೇ ಅವಧಿ ಮುಗಿದರೂ ಈ ವೈರಾಣು ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಿಲ್ಲ ಎಂಬುದೇ ಕಳವಳಕಾರಿ ಸಂಗತಿ.
ಭಾರತದಲ್ಲಿ ಕೊರೋನಾ ರಣಕೇಕೆ ಮುಂದುವರಿದಿದ್ದು ಶನಿವಾರ ಒಂದೇ ದಿನದಲ್ಲಿ ಬರೋಬ್ಬರಿ 4,987 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 90,000 ದಾಟಿದೆ.
ಈ ಕುರಿತಂತೆ ಆರೋಗ್ಯ ಇಲಾಖೆ ವರದಿ ಬಹಿರಂಗಪಡಿಸಿದ್ದು ಶನಿವಾರ ರಾತ್ರಿ ವರೆಗೆ 90,927 ಮಂದಿಯಲ್ಲಿ ಈ ವರೆಗೂ ಸೋಂಕು ಪತ್ತೆಯಾಗಿದೆ ಎಂದು ಹೇಳಿದೆ. ಈ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಶನಿವಾರ 606 ಪ್ರಕರಣಗಳು ಪತ್ತೆಯಾಗಿದ್ದು ಅಲ್ಲಿ ಕೊರೋನಾ ವೈರಸ್ ಸೋಂಕಿತರ ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿದೆ. ಗುಜರಾತಿನಲ್ಲಿ ಶನಿವಾರ 709 ಪ್ರಕರಣಗಳು ದಾಖಲಾಗಿದ್ದು ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಕ್ರಮಿಸಿದೆ.
ಇದೆ ವೇಳೆ ಶನಿವಾರ ಒಂದೇ ದಿನ ವಿವಿಧ ರಾಜ್ಯಗಳಲ್ಲಿ 120 ಮಂದಿ ಕೊರೋನಾ ಸೋಂಕಿಗೊಳಗಾಗಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 2,872ಕ್ಕೇ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಇದನ್ನೂ ಓದಿ.. ಕುಡಿಯುವ ನೀರಿನ ಘಟಕದ ಅವ್ಯವಸ್ಥೆ; ಅಧಿಕಾರಿಗಳ ಬೆವರಿಳಿಸಿದ ಸಚಿವ