ರಾಜ್ಯದ 243 ಕಡೆ ಕೊರೊನಾ ಲಸಿಕೆ ವಿತರಣೆ: 8,14,500 ಡೋಸ್ ಲಭ್ಯ

ಬೆಂಗಳೂರು: ರಾಜ್ಯದ 243 ಕಡೆಗಳಲ್ಲಿ ಶನಿವಾರ (ಜನವರಿ 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ ಎಂದರು. ಬೆಂಗಳೂರು ಒಂದರಲ್ಲೇ 10 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ನೀಡಲಾಗುವುದು. ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದ 237 ಕೇಂದ್ರ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

7,17,439 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಮೊದಲ ದಿನ 24,300 ಮಂದಿಗೆ ನೀಡುವ ಗುರಿ ಇದೆ. ನಮ್ಮಲ್ಲಿ ಒಟ್ಟು 8,14,500 ಡೋಸ್ ಲಸಿಕೆ ಲಭ್ಯವಿದ್ದು, ಒಂದು ವಾರದೊಳಗೆ ಮೊದಲ ಹಂತದ ವಿತರಣೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದರು.

Related posts