ಊರಿಗೆ ಅರಸನಾದರೂ ತಾಯಿಗೆ ಮಗ ಎಂಬುದು ಗಾದೆಮಾತು. ಮಾಹಾಮಾರಿ ಕೊರೋನಾ ವೈರಸ್’ಗೆ ಅರಸನಾದರೇನು ಪ್ರಜೆಯಾದರೇನು? ಯಮಧೂತನಂತೆ ಕಾಡುತ್ತಿರುವ ಕೋವಿಡ್-19 ವೈರಾಣು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದ್ದು ರಾಜಮನೆತನವನ್ನೂ ಬಿಟ್ಟಿಲ್ಲ. ಒಂದೊಮ್ಮೆ ಜಗತ್ತನೇ ಆಳಿರುವ ಬ್ರಿಟನ್ ರಾಜಮನೆತನದ ಮಂದಿಯೇ ಇದೀಗ ಹೆಮ್ಮಾರಿ ಕೊರೋನಾ ಸೋಂಕಿನಿಂದ ನಲುಗಿದೆ.
ಇಂಗ್ಲೆಂಡ್ ನಾದ್ಯಂತ 425ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಮಹಾಮಾರಿ ಕೋವಿಡ್-19 ವೈರಸ್ ಬ್ರಿಟನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್’ಗೆ ತಗುಲಿರುವುದು ದೃಢಪಟ್ಟಿದೆ. ಕ್ಲಾರೆನ್ಸ್ ಹೌಸ್ ಮೂಲಗಳ ಪ್ರಕಾರ ಪ್ರಿನ್ಸ್ ಚಾರ್ಲ್ಸ್’ಗೆ ಕೊರೋನಾ ರೋಗಲಕ್ಷಣಗಳು ಕಾಣಿಸಿವೆ. ಆದರೆ ಅವರು ಸುರಕ್ಷಿತರಾಗಿದ್ದಾರೆ.
ಸ್ಕಾಟ್ ಲ್ಯಾಂಡ್ ನಲ್ಲಿ ಪತ್ನಿ ಜೊತೆ ವಾಸವಿರುವ ಪ್ರಿನ್ಸ್ ಚಾರ್ಲ್ಸ್ ತಮ್ಮ ಎಸ್ಟೇಟ್ ನಲ್ಲಿರುವ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ಮೂಲಗಳು ತಿಳಿಸಿವೆ.
ರಾಣಿ ಎಲಿಜಬೆತ್ ಅವರ ಮೊದಲ ಪುತ್ರನೂ ಆಗಿರುವ 71 ವರ್ಷ ಹರೆಯದ ಪ್ರಿನ್ಸ್ ಚಾರ್ಲ್ಸ್, ಬ್ರಿಟನ್ ಅರಸೊತ್ತಿಗೆಯ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ಹಲವಾರು ಮಂದಿಯನ್ನು ಭೇಟಿಯಾಗುತ್ತಿದ್ದರು. ಮಹಾಮಾರಿ ಕೊರೋನಾ ವೈರಸ್ ದಾಳಿಯಿಂದ ತತ್ತರಿಸಿರುವ ಇಂಗ್ಲೆಂಡ್’ನಲ್ಲಿ ಸಾರ್ವಜನಿಕ ಭೇಟಿಯಿಂದಲೇ ಪ್ರಿನ್ಸ್ ಚಾರ್ಲ್ಸ್’ಗೆ ಸೋಂಕು ಅಂಟಿಕೊಂಡಿರಬೇಕೆಂದು ಹೇಳಲಾಗುತ್ತಿದೆ.
ಈ ನಡುವೆ, ಚಾರ್ಲ್ಸ್ ಜೊತೆಗಿದ್ದ ಪತ್ನಿ ಕ್ಯಾಮಿಲ್ಲಾ ಅವರ ಆರೋಗ್ಯದ ಬಗ್ಗೆಯೂ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಅವರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟೀವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.