ಲಾಕ್ ಡೌನ್ ಉಲ್ಲಂಘಿಸಿ ಬೀದಿಗಿಳಿದರೆ ಹುಷಾರ್..!! ಕಂಡಲ್ಲಿ ಗುಂಡು?

ಲಾಕ್ ಡೌನ್.. ಲಾಠಿ ಚಾರ್ಜ್.. ಇನ್ನು ಮುಂದೆ ಶೂಟ್ ಅಟ್ ಸೈಟ್?

ಹೌದು, ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾಗಿದ್ದು ಜನ ಮನೆ ಬಿಟ್ಟು ಹೊರಗೆ ಬರುವಂತಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿ ಜನ ಗುಂಪುಗುಂಪಾಗಿ ಸೇರಿದರೆ ಪೊಲೀಸರು ಲಾಠಿ ಏಟಿನ ರುಚಿ ಉಣಿಸುತ್ತಿದ್ದಾರೆ. ಈವರೆಗೂ ಲಾಠಿ ಪ್ರಹಾರ ಮಾಡುತ್ತಿದ್ದ ಪೊಲೀಸರು ಇನ್ನು ಮುಂದೆ ಗುಂಡಿನ ಉತ್ತರ ನೀಡಲಿದ್ದಾರಂತೆ.

ತೆಲಂಗಾಣ ಪೊಲೀಸರು ಈ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ. ಲಾಕ್ ಡೌನ್ ಆದೇಶ ಉಲ್ಲಂಘಿಸಿ ಬೀದಿಗಿಳಿದರೆ, ಪರಿಸ್ಥಿತಿ ವಿಷಮ ಸ್ಥಿತಿ ತಲುಪಿದರೆ ಕಂಡಲ್ಲಿ ಗುಂಡಿಗೆ ಆದೇಶ ನೀಡಬೇಕಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ.

21 ದಿನಗಳ ಲಾಕ್ ಡೌನ್’ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರೂ ತೆಲಂಗಾಣದಲ್ಲಿ ಈ ಆದೇಶ ಪಾಲಿಸುತ್ತಿಲ್ಲ. ಬೀದಿಬೀದಿಗಳಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಇದೀಗ ಜನರಿಗೆ ಸಿಎಂ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಜನರು ಒಂದು ವೇಳೆ ಲಾಕ್ ಡೌನ್ ಉಲ್ಲಂಘಿಸುವುದನ್ನು ಮುಂದುವರಿಸಿದಲ್ಲಿ ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿ, ಕಂಡಲ್ಲಿ ಗುಂಡಿಗೆ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಸದ್ಯ ಅಮೆರಿಕಾ ಹಾಗೂ ಇಟಲಿಯಲ್ಲಿ ಈ ರೀತಿಯ ನಿಷ್ಠುರ ಕ್ರಮಗಳನ್ನು ಅನುಸರಿಸುತ್ತಿರುವುದನ್ನು ಅವರು ಬೊಟ್ಟು ಮಾಡಿದ್ದಾರೆ.  ಇದೆ ವೇಳೆ, ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಅಂಥವರ ಪಾಸ್ ಪೋರ್ಟ್ ರದ್ದು ಮಾಡುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

Related posts