ಬೆಂಗಳೂರು: ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ರಾಗಿ, ಮುಸುಕಿನ ಜೋಳದ ಬೆಳೆಗೆ ಹಾಕುವ ಯೂರಿಯಾ ರಸಗೊಬ್ಬರ ಕೊಳ್ಳಲು ನಗರದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆ ಕೇಂದ್ರಕ್ಕೆ ಮುಗಿಬಿದ್ದಾರೆ. ಕಳೆದ ನಾಲ್ಕು ದಿನದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಬೆಳೆಗಳಿಗೆ ಜೀವಕಳೆ ಬಂದಿದೆ. ಉತ್ತಮ ಫಸಲು ನಿರಿಕ್ಷೆಯಲ್ಲಿರುವ ರೈತರು ಯೂರಿಯಾ ರಸಗೊಬ್ಬರ ಕೊಳ್ಳಲು ಮುಗಿಬಿದ್ದರು.
ತಾಲ್ಲೂಕಿನ ಎಲ್ಲಾ ರಸಗೊಬ್ಬರ ಮಾರಾಟದ ಅಂಗಡಿಗಳಲ್ಲೂ ಯೂರಿಯಾ ರಸಗೊಬ್ಬರ ದಾಸ್ತಾನು ಖಾಲಿಯಾಗಿದೆ. ನಗರದ ಟಿಎಪಿಎಂಸಿಎಸ್ ಮಾರಾಟ ಮಳಿಗೆಯಲ್ಲಿ ಮಾತ್ರ 29 ಟನ್ ದಾಸ್ತಾನು ಇದ್ದು, ಬೆಳಗ್ಗೆಯಿಂದಲೇ ನೂರಾರು ಜನ ರೈತರು ಯೂರಿಯಾ ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ. ಯೂರಿಯಾ ರಸಗೊಬ್ಬರ ದಾಸ್ತಾನು ಕೊರತೆ ಇರುವ ಹಿನ್ನೆಲೆ ಒಬ್ಬ ರೈತರಿಗೆ ತಲಾ ಒಂದು ಚೀಲ ಮಾತ್ರ ನೀಡಲಾಗುತ್ತಿದೆ.
29 ಟನ್ ಯೂರಿಯಾ ಗೊಬ್ಬರ ಸಂಪೂರ್ಣ ಮಾರಟವಾಗಿದೆ. ಮುಂದಿನ ನಾಲ್ಕು ದಿನಗಳ ಒಳಗೆ 150 ಟನ್ ಯೂರಿಯಾ ಬರಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಮಳೆ ಕಡಿಮೆಯಾದ ಹಿನ್ನೆಲೆ ರೈತರಿಂದ ಯೂರಿಯಾ ಬೇಡಿಕೆ ಕಡಿಮೆ ಇತ್ತು. ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಮತ್ತೆ ಯೂರಿಯಾಗೆ ಬೇಡಿಕೆ ಬಂದಿದೆ. ಅಗತ್ಯಕ್ಕಿಂತ ಹೆಚ್ಚಿನ ಯೂರಿಯಾಗೆ ಈ ಬಾರಿ ಬೇಡಿಕೆ ಬಂದಿದೆ. ಎಲ್ಲಾ ರೈತರಿಗೂ ಯೂರಿಯಾ ವಿತರಣೆಗೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದ್ದಾರೆ.