ಬೆಂಗಳೂರು: ಕ್ರಿಯಾಶೀಲ ಕ್ರಮಗಳ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುವ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಬಿ.ದಯಾನಂದ್ ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕನ್ನಡಿಗರ ಮನ ಗೆದ್ದಿದ್ದಾರೆ.
ಪೊಲೀಸ್ ಇಲಾಖೆಯ ‘ಶಿಸ್ತಿನ ಮಂತ್ರ’ವನ್ನು ಕನ್ನಡದಲ್ಲಿ ಪ್ರಯೋಗಿಸುವ ಮೂಲಕ ಬೆಂಗಳೂರು ಕಮೀಷನರೇಟ್ ರಾಜ್ಯದ ಗಮನೆಳೆದಿದೆ. ಈ ವಿಚಾರದಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ. ಇವರ ಈ ಕ್ರಮಕ್ಕೆ ಕನ್ನಡಾಭಿಮಾನಿಗಳಿಂದ ಅಭಿನಂದನೆಯ ಮಹಾಮಳೆಯಾಗುತ್ತಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ, ಇಲಾಖೆಯ ಕಾರ್ಯವೈಖರಿಗೆ ಚುರುಕು ನೀಡಿರುವ ಬಿ.ದಯಾನಂದ್ ಅವರು, ಪಿಎಸ್ಐ ವರ್ಗಾವಣೆ ವಿಚಾದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಸಿಗದ ರೀತಿ ನಿಯಮ ಜಾರಿಗೆ ತಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಇದೀಗ ರಾಜಧಾನಿ ಪೊಲೀಸರ ಶಕ್ತಿಸ್ಥಳ ಆಗಿರುವ ಆಯುಕ್ತರ ಕಚೇರಿಯಲ್ಲಿ ಕನ್ನಡ ಮಂತ್ರ ಪಠಿಸಲಾಗುತ್ತದೆ. ಆಯುಕ್ತರ ಕಚೇರಿಯಲ್ಲಿ ಕನ್ನಡದಲ್ಲಿ ಗೌರವ ವಂದನೆ ನೀಡಲಾಗುತ್ತಿದೆ.
ಈ ಗೌರವ ವಂದನೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೊಲೀಸ್ ಆಯುಕ್ತ ಬಿ.ದಯಾನಂದ್, ‘ಕನ್ನಡದ ಮಾತು ಚಂದ; ಕನ್ನಡದ ಕಮಾಂಡ್‌ಗಳು ಇನ್ನೂ ಚಂದ’ ಎಂದಿದ್ದಾರೆ. ಈ ಬಗ್ಗೆ ಏನಂತೀರಿ ಎಂದು ದಯಾನಂದ್ ಅವರು ಸಾರ್ವಜನಿರಲ್ಲಿ ಅಭಿಪ್ರಾಯ ಕೇಳಿದ್ದಾರೆ. ಇವರ ಈ ಕನ್ನಡ ಸಾಲುಗಳಿಗೆ ಅನೇಕರು ಮೆಚ್ಚುಗೆ ಸೂಚಿಸಿದರೆ, ಅನೇಕರು ತಮ್ಮದೇ ದಾಟಿಯಲ್ಲಿ ಸಲಹೆಗಳನ್ನು ಮುಂದಿಟ್ಟಿದ್ದಾರೆ.
ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್ ಗಳು ಇನ್ನೂ ಚಂದ. ಏನಂತಿರಾ …. pic.twitter.com/6ZoIgAjbar
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) September 7, 2023
ಪೊಲೀಸ್ ಇಲಾಖೆಯಲ್ಲಿರುವ ಹಿಂದಿ ಭಾಷೆಯ ಕಮಾಂಡ್‌ಗಳನ್ನು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕನ್ನಡಕ್ಕೆ ಭಾಷಾಂತರಿಸಿ ಬಳಸಲಾಗುತ್ತದೆ. ಈ ಕುರಿತ ಬಿ.ದಯಾನಂದ್ ಅವರ ಪೋಸ್ಟ್ ಬಗ್ಗೆ ಕನ್ನಡಿಗರು ಸಕತ್ ಲೈಕ್ಸ್ ವ್ಯಕ್ತಪಡಿಸಿದ್ದಾರೆ. ‘ನೀವು (ರಾಜ್ಯ ಪೊಲೀಸ್ ಇಲಾಖೆ) ಕನ್ನಡ ಘೋಷಣೆಗಳ, ಅಪ್ಪಣೆಕೂಗುಗಳ ಬಳಸಿ ಕನ್ನಡ ನಾಡಿನ ಪ್ರತಿ ಮಕ್ಕಳಿಗೂ ಕನ್ನಡವನ್ನೇ ಬಳಸಿ ಗೌರವ ಸಲ್ಲಿಸಿದ್ದೀರಿ. 6.5 ಕೋಟಿ ಹೃದಯಗಳು ನಿಮ್ಮ ಜೊತೆಯಲ್ಲಿರುತ್ತವೆ. ನಮಗೆ ಕೂಡ ನಿಮ್ಮಇಲಾಖೆ ತೋರಿದ ಗೌರವದಿಂದ ಸಂತಸವಾಯಿತು’ ಎಂದು ಕನ್ನಡಾಭಿಮಾನಿಯೊಬ್ಬರು ಮಾರುದ್ದದ ಪ್ರತಿಕ್ರಿಯೆ ನೀಡಿದ್ದಾರೆ.
ಆರಕ್ಷಕ ಪಡೆಯ ಈ ಕನ್ನಡ ಪರ ಕಾಳಜಿ ನಾಡಿನ ಜನತೆಗೆ ಉತ್ತಮ ಸoದೇಶ ನೀಡುತ್ತದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ, ಇನ್ನೂ ಅನೇಕರು, ‘ಎಲ್ಲಾ ಶಾಲಾ-ಕಾಲೇಜುಗಳೂ ಇದೇ ರೀತಿಯ ಕ್ರಮಗಳನ್ನು ಅನುಸರಿಸಬೇಕು’ ಎಂದು ಸಲಹೆ ಮುಂದಿಟ್ಟಿದ್ದಾರೆ.