ಲೋಕಸಭಾ ಚುನಾವಣೆಯಲ್ಲಿ ರೈತರ ಬೆಂಬಲ ಯಾವ ಪಕ್ಷಕ್ಕೆ? 20 ರಾಜ್ಯಗಳಲ್ಲಿ ಪಂಚಾಯತ್ ಸಮಾವೇಶದಲ್ಲಿ ತೀರ್ಮಾನ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ರೈತರು ಯಾವ ಪಕ್ಷವನ್ನು ಬೆಂಬಿಸಬೇಕು ಎಂಬ ಬಗ್ಗೆ ನಿರ್ಧರಿಸಲು ದೇಶಾದ್ಯಂತ 20 ರಾಜ್ಯಗಳಲ್ಲಿ ರೈತರ ಕಿಸಾನ್ ಮಹಾ ಪಂಚಾಯತ್ ಸಮಾವೇಶ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ರಾಷ್ಟ್ರೀಯ ಸಭೆ ತೀರ್ಮಾನಿಸಿದೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಂಘಟನೆಯ ಎರಡು ದಿನಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೈತರು ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳಲು 20 ರಾಜ್ಯಗಳಲ್ಲಿ ಕಿಸಾನ್ ಮಹಾಪಂಚಾಯತ್ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು ಅಂತಿಮವಾಗಿ ನವ ದೆಹಲಿಯಲ್ಲಿ 2024ರ ಫೆಬ್ರವರಿ 26ರಂದು 10 ಲಕ್ಷ ರೈತರ ದೆಹಲಿ ಚಲೋ ರ್ಯಲಿ ನಡೆಸಿ ಅಂತಿಮ ಘೋಷಣೆ ಪ್ರಕಟಿಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ, ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ತಿಳಿಸಿದ್ದಾರೆ.‌

ಸಭೆಯ ತೀರ್ಮಾನಗಳ ಕುರಿತು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರೂ ಆದ ಕುರುಬೂರು ಶಾಂತಕುಮಾರ್ ಸಹಿತ ವಿವಿಧ ರಾಜ್ಯಗಳ ರೈತ ಮುಖಂಡರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಗಜಿತ್ ಸಿಂಗ್ ದಲೈವಾಲ, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ರೈತರ ಒತ್ತಾಯವನ್ನು ಪ್ರಾಮಾಣಿಕವಾಗಿ ಒಪ್ಪುತ್ತದೆಯೋ ಅಂತಹ ಪಕ್ಷವನ್ನು ಬೆಂಬಲಿಸಲು ರೈತರಿಗೆ ಕರೆ ನೀಡಲಾಗುವುದು ಎಂದರು.

ಪ್ರಮುಖ ತೀರ್ಮಾನಗಳು: 

  • ದೇಶಾದ್ಯಂತ ರೈತರ ಕೃಷಿ ಸಾಲ ಮನ್ನ ಮಾಡಬೇಕು ರೈತರು ಸಾಲ ಮಾಡಿ ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದಾರೆ, ಅತಿವೃಷ್ಟಿ ಅನಾವೃಷ್ಟಿ ಬರಗಾಲಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಕಾರಣ ಸಾಲಮನ್ನ ಮಾಡಬೇಕು. 

  • ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡಿ ರೈತರಿಗೆ ಖಾತರಿ ಆದಾಯ ಸಿಗುವಂತೆ ಮಾಡಬೇಕು. 

  • ಎಲ್ಲಾ ಕೃಷಿ ಉತ್ಪನ್ನ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಿ ಅತಿವೃಷ್ಟಿ ಬರಗಾಲಕ್ಕೆ ತುತ್ತಾದಾಗ, ಸಂಪೂರ್ಣ ನಷ್ಟ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕು. 

  • ದೇಶದ ನೂರು ನಲವತ್ತು ಕೋಟಿ ಜನರಿಗೆ ಆಹಾರ ಉತ್ಪಾದಿಸಲು 60 ವರ್ಷ ಸತತ ಕಾಯಕ ಮಾಡಿ ಸೇವೆ ಸಲ್ಲಿಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. 

  • ಕೃಷಿಪಂಪ್ ಸೇಟ್ ಗಳನ್ನು ವಿದ್ಯುತ್ ಖಾಸಗಿಕರಣ ವ್ಯಾಪ್ತಿಗೆ ತರಲು , ವಿದ್ಯುತ್ ಖಾಸಗಿಕರಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡುವುದನ್ನು ಕೈ ಬಿಡಬೇಕು. 

  • ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ವಸಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು, ಅವಶ್ಯಕತೆ ಇದ್ದ ಸಂದರ್ಭದಲ್ಲಿ ರೈತನ ಅನುಮತಿಯನ್ನು ಕಡ್ಡಾಯಗೊಳಿಸಬೇಕು.

  • ದೇಶಾದ್ಯಂತ ರೈತರ ಮೇಲಿನ ರೈತ ಹೋರಾಟದ ಮೊಖದಮೆ ವಾಪಸ್ ಪಡೆಯಬೇಕು. 

 

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್, ಈ ಒತ್ತಾಯಗಳ ಬಗ್ಗೆ ಚರ್ಚಿಸಿ ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಿ ಎಲ್ಲಾ ರೈತ ಸಂಘಟನೆಗಳ ಮುಖಂಡರ ಸಹಕಾರದೊಂದಿಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು,

ಪಂಜಾಬ್ ಜಗಜಿತ್ ಸಿಂಗ್ ದಲೈವಾಲಾ, ಮಧ್ಯ ಪ್ರದೇಶದ ಶಿವಕುಮಾರ್ ಕಕ್ಕ, ಹರಿಯಾಣದ ಅಭಿಮನ್ಯುಕೊಹರ್, ಕೇರಳ ಕೆ ವಿ ಬಿಜು, ಗುಜರಾತ್ ಜೆ ಕೆ ಪಟೇಲ್ ಬಿಹಾರ್ ವರುಣ್ ಕುಮಾರ್, ಉತ್ತರ ಪ್ರದೇಶ್ ಒರಿಸ್ಸಾ ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳ ರೈತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts