ದೆಹಲಿ: ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ರಾಜಕೀಯ ಮನ್ವಂತರ ಆರಂಭಿಸಿದ್ದ ಆಮ್ ಆದ್ಮಿ ನಾಯಕ ಅರವಿಂದ ಕೇಜ್ರಿವಾಲ್ ಅವರ ದಿಗ್ವಿಜಯದ ಪರ್ವ ಮುಂದುವರಿದಿದೆ. ಕೇಜ್ರಿವಾಲ್ ಹ್ಯಾಟ್ರಿಕ್ ದಿಗ್ವಿಜಯ ಸಾಧಿಸಿದ್ದು ದಿಲ್ಲಿಯಲ್ಲಿ ಮತ್ತೆ ಆಪ್ ದರ್ಬಾರ್ ನಡೆಯಲಿದೆ.
ಮತ್ತೊಮ್ಮೆ ದೇಶದ ಗದ್ದುಗೆ ಏರಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಷ್ಠೆಯ ಕಾಣದಂತಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು ದಿಲ್ಲಿ ಸಾಮ್ರಾಜ್ಯ ಕಸಿದುಕೊಳ್ಳುವ ಕಮಲಾ ಸೈನ್ಯದ ಕನಸು ಭಗ್ನವಾಗಿದೆ. ಅದರಲ್ಲೂ ಕಾಂಗ್ರೆಸ್ ಶೂನ್ಯ ಸಾಧನೆಯೊಂದಿಗೆ ದಿಲ್ಲಿ ಅಖಾಡದಲ್ಲಿ ಮುಖಬಂಗ ಅನುಭವಿಸಿದೆ.
ಫೆಬ್ರವರಿ 8ರಂದು ದೆಹಲಿ ವಿಧಾನಸಭೆಗೆ ಚುನಾವಣೆ ಮತದಾನ ನಡೆದಿತ್ತು. ಇಂದು ನಡೆದ ಮತ ಎಣಿಕೆ ಪ್ರಕ್ರಿಯೆಯುದ್ದಕ್ಕೂ ಆಪ್ ಅಭ್ಯರ್ಥಿಗಳೇ ಮುನ್ನಡೆ ಸಾಧಿಸುತ್ತಿದ್ದರು. 70 ಸ್ಥಾನಗಳ ಪೈಕಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳನ್ನೂ ಗೆದ್ದು ಮೂರನೇ ಬಾರಿಗೆ ಅಧಿಕಾರಕ್ಕೇರುತ್ತಿದೆ. ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. .
ಈ ಫಲಿತಾಂಶ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ದೆಹಲಿ ಜನರ ಗೆಲುವು, ಭಾರತ ಮಾತೆಯ ಗೆಲುವು. ನನ್ನನ್ನು ಸತತ ಮೂರನೇ ಬಾರಿಗೆ ಗೆಲ್ಲಿಸಿದ ದೆಹಲಿಯ ಜನತೆಗೆ ನಾನು ಚಿರ ಋಣಿ ಎಂದರು