ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸಿಎಂ ಆಪತ್ಕಾಲಯಾನ’ ಯೋಜನೆಯ 65 ಆಂಬುಲೆನ್ಸ್‌ಗಳನ್ನು ಸಿಎಂ ಸೇವೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಠಿಣ ನಿಯಮಗಳಿದ್ದರೂ, ಅನೇಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಕೆಲವರ ನಿರ್ಲಕ್ಷ್ಯದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಪಘಾತಗಳನ್ನು ತಡೆಯಬಹುದು ಎಂದ ಸಿದ್ದರಾಮಯ್ಯ, ಕುಡಿದು ವಾಹನ ಚಲಾಯಿಸುವ ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಈ ರೀತಿಯ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಚಾಲನಾ ಪರವಾನಗಿ ರದ್ದು ಮಾಡಬೇಕೆಂದು ಸಿಎಂ ಅವರು ಸಾರಿಗೆ ಇಲಾಖೆಗೆ ಸೂಚನೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.