ದೊಡ್ಡಬಳ್ಳಾಪುರ: ತಂತ್ರಜ್ಞಾನದ ಮೂಲಕ ಮತದಾರರ ಮಾಹಿತಿ ಪಡೆದು ಪ್ರಚಾರ ಮಾಡಲಷ್ಟೇ ಕ್ಯೂಆರ್ ಕೋಡ್ ಕೂಪನ್ ವಿತರಿಸಲಾಗುತ್ತಿದೆಯೇ ವಿನಃ ಯಾವುದೇ ದುರುದ್ದೇಶದಿಂದಲ್ಲ ಎಂದು ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಸ್ಪಷ್ಟಪಡಿಸಿದ್ದಾರೆ.
ದೊಡ್ಡಬಳ್ಳಾಪುರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯ ಜಿಲ್ಲೆಯ ಕಾರ್ಯಕರ್ತರಿಂದ ಥರ್ಡ್ ಪಾರ್ಟಿ ಕ್ಯಾಂಪೇನ್ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮತದಾರರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮುಟ್ಟಲಾಗುತ್ತಿದೆ. ಕ್ಯೂಆರ್ ಕೋಡ್ ಕೂಪನ್ ಬಳಸಿ ಪ್ರಚಾರ ನಡೆಸುವುದು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ತಂತ್ರಜ್ಞಾನದ ಅರಿವಿಲ್ಲ. ಸೋಲಿನ ಭೀತಿಯಿಂದ ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಈಗಾಗಲೇ ಕಾಂಗ್ರೆಸ್ ಪಕ್ಷ, ಭಜರಂಗದಳ ನಿಷೇಧಿಸುವ ಪ್ರಸ್ತಾವದಿಂದಾಗಿ ಜನರ ವಿರೋಧ ಕಟ್ಟಿಕೊಂಡಿದೆ. ಅದರಿಂದ ಪಾರಾಗಲು ಕ್ಯೂಆರ್ ಕೋಡ್ ಕುರಿತು ಅಪಪ್ರಚಾರ ಮಾಡುವ ಕುತಂತ್ರ ಮಾಡುತ್ತಿದೆ. -ಧೀರಜ್ ಮುನಿರಾಜು, ಬಿಜೆಪಿ ಅಭ್ಯರ್ಥಿ.
ಸಾಸಲು ಹೋಬಳಿಯಲ್ಲಿ ಮತದಾರರಲ್ಲಿ ಭಯ ಮೂಡಿಸಿ ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ. ಬಿಜೆಪಿ ಕಾರ್ಯಕರ್ತರು ಯಾರೂ ಕೂಡ ವೈಯಕ್ತಿಕ ಮಾಹಿತಿ ಕೇಳಿಲ್ಲ. ತಂತ್ರಜ್ಞಾನ ಉಪಯೋಗಿಸಿ ವಿಷಯಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಗ್ಯಾರೆಂಟಿ ಕಾರ್ಡ್ ಹಂಚುವ ಮೂಲಕ ಆಮಿಷವೊಡ್ಡುತ್ತಿದ್ದಾರೆ. ನಮ್ಮಲ್ಲಿ ನಿತ್ಯ ಸ್ಟಾರ್ ಪ್ರಚಾರಕರು ಬಂದು ಹೋಗುತ್ತಿರುವುದರಿಂದ ಎರಡೂ ಪಕ್ಷಗಳಿಗೆ ಸೋಲಿನ ಭೀತಿ ಉಂಟಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಅಶ್ವತ್ಥನಾರಾಯಣಕುಮಾರ್ ಮಾತನಾಡಿ, ಚುನಾವಣೆ ಸೋಲಿನ ಭೀತಿಯಲ್ಲಿರುವ ದಳ ಹಾಗೂ ಕಾಂಗ್ರೆಸ್ ಪಕ್ಷದ ಹಿಂಬಾಲಕರು ಬಿಜೆಪಿಯ ಏಳಿಗೆ ಸಹಿಸದೇ ಹೊಸಹಳ್ಳಿ, ಆರೂಢಿ, ಭಕ್ತರಹಳ್ಳಿ ಪಂಚಾಯ್ತಿಯಲ್ಲಿ ಅಹಿತಕರ ಘಟನೆಗೆ ಸಾಕ್ಷಿಯಾಗಿದ್ದಾರೆ. ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ದೌರ್ಜನ್ಯ ಎಸಗಲಾಗಿದೆ ಎಂದು ದೂರಿದರು.
ನೀತಿ ಸಂಹಿತೆ ಉಲ್ಲಂಘಿಸಿದರೆ ದೂರು ನೀಡಲಿ, ಆದರೆ, ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಪೊಲೀಸ್ ಠಾಣೆಗೆ ಎಳೆದೊಯ್ಯುವುದು ಸರಿಯಲ್ಲ ಎಂದರು. ಮತದಾರರು ಅಪಪ್ರಚಾರಕ್ಕೆ ಕಿವಿಗೊಡಬಾರದು. ನಿರ್ಭಯವಾಗಿ ಮತ ಹಾಕಬೇಕು. ಚುನಾವಣೆಗು ಮುನ್ನವೇ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹೊಂದಾಣಿಕೆ ರಾಜಕೀಯ ಮಾಡುತ್ತಿವೆ. ಕ್ಯೂಆರ್ ಕೋಡ್ ಕೂಪನ್ ಕುರಿತು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.
ಹೊಸಹಳ್ಳಿ, ಭಕ್ತರಹಳ್ಳಿ, ಆರೂಢಿ ಪಂಚಾಯ್ತಿಗಳಲ್ಲಿ ಕ್ಯೂಆರ್ ಕೋಡ್ ಕೂಪನ್ ವಿತರಿಸುತ್ತಿದ್ದವರನ್ನು ಚುನಾವಣಾಧಿಕಾರಿಗಳು ಬಂಧಿಸಿ, ಸಾಮಗ್ರಿ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅನುಮಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದರು. ಮತದಾರರಿಗೆ ಆಮಿಷವೊಡ್ಡಲು ಕ್ಯೂಆರ್ ಕೋಡ್ ಬಳಸಿದೆ ಎಂದು ಆರೋಪಿಸಿದ್ದರು. ತಾಲೂಕಿನಾದ್ಯಂತ ಕ್ಯೂಆರ್ ಕೋಡ್ ಕೂಪನ್ ಸುದ್ದಿ ಶರವೇಗದಲ್ಲಿ ಹಬ್ಬುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಧಿರಜ್ ಮುನಿರಾಜು ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ,ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಪುಷ್ಪಾ ಶಿವಶಂಕರ್, ಬಿ.ಸಿ. ಆನಂದಕುಮಾರ್, ಟಿ.ವಿ.ಲಕ್ಷ್ಮೀನಾರಾಯಣ್, ಗೋಪಿ, ನಗರಸಭೆ ಸದಸ್ಯ ಬಂತಿ ವೆಂಕಟೇಶ್, ಕಾಂತರಾಜು ಮೊದಲಾದ ಮುಖಂಡರು ಉಪಸ್ಥಿತರಿದ್ದರು.