ಅಕ್ರಮ ಗೋಮಾಂಸ ಸಾಗಿಸುತ್ತಿದ್ದವರ ಮೇಲೆ ಹಿಂದೂ ಕಾರ್ಯಕರ್ತರ ದಾಳಿ: ಕಾರಿಗೆ ಬೆಂಕಿ

ಅಕ್ರಮ ಗೋಮಾಂಸ ಸಾಗಾಟದ ಮೇಲೆ ಹಿಂದೂ ಕಾರ್ಯಕರ್ತರ ದಾಳಿ: ಕಾರಿಗೆ ಬೆಂಕಿ ಇಟ್ಟ ಕಾರ್ಯಕರ್ತರು.. ಪೊಲೀಸರ ಕ್ಷಿಪ್ರ ಕಾರ್ಯಾಚರಣೆ.. ಹಲವರ ಬಂಧನ..

ದೊಡ್ಡಬಳ್ಳಾಪುರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತರು ಒಂದು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಭಾನುವಾರ‌ ಬೆಳಿಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಟಾಟಾ ಏಸ್ ಮತ್ತು ಬೊಲೇರೋ ಸೇರಿದಂತೆ ಐದು ವಾಹನಗಳಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ತಂಡದ ಮೇಲೆ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ದಿಗ್ಬಂಧನ ಹಾಕಿದ್ದಾರೆ.

ಹಿಂದೂಪುರದಿಂದ ಬೆಂಗಳೂರಿನ ಶಿವಾಜಿ ನಗರಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ತಾಲ್ಲೂಕಿನ ಕಂಟನಕುಂಟೆ ಬಳಿ ತಡೆದ ಯುವಕರು, ದೊಡ್ಡಬಳ್ಳಾಪುರ ನಗರದ ಡಾ.ಬಿಆರ್.ಅಂಬೇಡ್ಕರ್ ವೃತ್ತದ ಬಳಿಗೆ ಕರೆದೊಯ್ದು ಥಳಿಸಿದ್ದಾರೆನ್ನಲಾಗಿದೆ. ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಮತ್ತೊಂದು ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರಿಗೆ ಹೊತ್ತಿಸಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿತ್ತಾದರೂ, ಕಾರು ಸಂಪೂರ್ಣ ಭಸ್ಮವಾಗಿದೆ. ಐದು ವಾಹನಗಳಲ್ಲಿ ಸುಮಾರು ₹50 ಲಕ್ಷ ಬೆಲೆ ಬಾಳುವ 30 ಟನ್ ಗೂ ಹೆಚ್ಚು ಗೋಮಾಂಸ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಶ್ರೀರಾಮ ಸೇನೆಯ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಸುಂದರೇಶ್ ನರಗಲ್ ಅವರ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು, ನೂರಾರು ಕಾರ್ಯಕರ್ತರು ಸೇರಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಂಬರೀಶ್ ಅವರ ನೇತೃತ್ವದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಈ ವೇಳೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಐದು ವಾಹನಗಳ ಸಮೇತ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ಆರು ತಿಂಗಳಲ್ಲಿ ಬೆಳಕಿಗೆ ಬಂದಿಎಉವ ಮೂರನೇ ಅಕ್ರಮ ಗೋಮಾಸ ಸಾಗಾಣಿಕೆಯ ಪ್ರಕರಣ ಇದಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿರುವ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿವೆ ಇದಕ್ಕೆ ಕಡಿವಾಣ ಹಾಕಬೇಕೆಂದು ಹಿಂದೂ ಸಂಘಟನಗಳ ನಾಯಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

Related posts