ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ದಾಳಿ. ಸತತ 7 ತಾಸು ದಾಖಲೆ ಪರಿಶೀಲನೆ

ಬೆಂಗಳೂರು (ಗ್ರಾ): ದೊಡ್ಡಬಳ್ಳಾಪುರದ ತಾಲ್ಲೂಕು ಕಚೇರಿಯಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ (ಎಡಿಎಲ್‌ಆರ್) ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.

ಎಡಿಎಲ್ ಆರ್ ಕಚೇರಿಗೆ ಖುದ್ದು ಲೋಕಾಯುಕ್ತ ನ್ಯಾಯಾಧೀಶೆ ಹಾಗೂ ಡೆಪ್ಯುಟಿ ರಿಜಿಸ್ಟ್ರಾರ್ ಅನಿತಾ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ಲೋಕಾಯುಕ್ತ ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ವೀರೇಂದ್ರ ನೇತೃತ್ವದಲ್ಲಿ 15 ಮಂದಿ ತಂಡ ದಾಖಲೆ ಪರಿಶೀಲನೆ ನಡೆಸಿತು. ಲೋಕಾಯುಕ್ತ ದಾಳಿ ವೇಳೆ
ಸಾರ್ವಜನಿಕರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೋಡಿ, ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ ದೂರು ವಿವರಿಸುವಂತೆ ಕೇಳಿ ಕರೆದೋಯ್ದರು.

ಇದೇ ವೇಳೆ, ಭೂ ದಾಖಲೆಗಳ ಸಹಾಯಕ ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಲೋಕಾಯುಕ್ತ ನ್ಯಾಯಾಧೀಶೆ ಅನಿತಾ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭೂ ದಾಖಲೆಗಳ ಅಸಮರ್ಪಕ ವಿಲೇವಾರಿಯನ್ನು ಖುದ್ದು ನ್ಯಾಯಾಧೀಶರೇ ಗಮನಿಸಿದರು. ಎಡಿಎಲ್‌ಆರ್ ಕಚೇರಿ ಶೌಚಾಲಯದ ಖಾಲಿ ಜಾಗದಲ್ಲಿ ಬೇಕಾಬಿಟ್ಟಿ ಜೋಡಿಸಿರುವ ದಾಖಲೆಗಳನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಕಡತಗಳ ಮೂಟೆಗಳನ್ನು ತೆರವು ಮಾಡುವಂತೆ ಸೂಚಿಸಿದರು. ನಂತರ ಮಹಿಳಾ ಸಿಬ್ಬಂದಿಯಿಂದ ಶೌಚಾಲಯ ಸ್ವಚ್ಛತೆ ಕುರಿತು ಮಾಹಿತಿ ಪಡೆದ ನ್ಯಾಯಾಧೀಶರು, ಹೆಚ್ಚುವರಿ ಶೌಚಾಲಯ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದರು.

ಭೂ ದಾಖಲೆಗಳ ಸಹಾಯಕ ಕಚೇರಿಗೆ ಪ್ರತ್ಯೇಕ ಕಚೇರಿ ಏಕಿಲ್ಲ ಎಂದು ಎಡಿಎಲ್ಆರ್ ಮಂಜುನಾಥ್ ಅವರನ್ನು ಪ್ರಶ್ನಿಸಿದರು. ತಾಲ್ಲೂಕು ಕಚೇರಿ ಮತ್ತು ಎಡಿಎಲ್ಆರ್ ಕಚೇರಿ ಒಂದೆಡೆ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಪ್ರತ್ಯೇಕ ಕಚೇರಿಗಾಗಿ ನಗರ ಪೊಲೀಸ್ ಠಾಣಾ ಬಳಿ ಸ್ಥಳ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

Related posts