ರಸ್ತೆ, ಚರಂಡಿ, ಕಸ ಸಮಸ್ಯೆಗೆ ಸಿಗದ ಮುಕ್ತಿ; ಅಧಿಕಾರಿಗಳೊಂದಿಗೆ ಸಾರ್ವಜನಿಕರ ವಾಗ್ವಾದ.. ‘ಕೈ’ ಸದಸ್ಯರಿಂದ ಬಹಿಷ್ಕಾರ

ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳ ಅಗಲೀಕರಣ, ಕಸದ ಸಮಸ್ಯೆ, ರಸ್ತೆಗಳಲ್ಲಿನ ಗುಂಡಿ, ಒಳಚರಂಡಿ, ಖಾತೆಗಳ ಸಮಸ್ಯೆಗಳಿಗೆ ಶೀಘ್ರವಾಗಿ ಮುಕ್ತಿ ನೀಡಿ ಎಂದು ಶಾಸಕ ಧೀರಜ್ ಮುನಿರಾಜುಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರಸಭೆ ಆವರಣದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು ನಗರದಲ್ಲಿನ ರಸ್ತೆಗಳು ಅಭಿವೃದ್ಧಿಯಾಗದೆ, ಗುಂಡಿಗಳೆ ತುಂಬಿವೆ. ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಕಳೆದ 50 ವರ್ಷಗಳಿಂದ ಇದ್ದ ರಸ್ತೆಗಳೇ ಇಂದು ಇವೆ. ನಗರಕ್ಕೆ ತಕ್ಕಂತೆ ಒಂದೇ ಒಂದು ರಸ್ತೆಗಳು ಅಗಲೀಕರಣ ಆಗಿಲ್ಲ. ಪ್ರಮುಖ ವಾರ್ಡ್ ಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಬೀದಿ ದೀಪಗಳು ಇಲ್ಲವಾಗಿದೆ. ಒಂದನೇ ವಾರ್ಡ್ ರಾಜೀವ್ ಗಾಂಧಿ ಕಾಲೋನಿ ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದಾಗಿದೆ ಎಂದು ಅಳಲು ತೋಡಿಕೊಂಡರು.

ರೆವೆನ್ಯೂ ಸೈಟ್ ಗಳಿಗೆ ನಗರಸಭೆಯಿಂದ ಖಾತೆ ನೀಡಲು ಬರುವುದಿಲ್ಲ. ಖಾತೆ ಇಲ್ಲದ ಸೈಟ್ ಗಳಲ್ಲಿ ಮನೆಗಳ ನಿರ್ಮಾಣಕ್ಕೆ ನಗರಸಭೆಯಿಂದ ಅನುಮತಿ ನೀಡುವುದಿಲ್ಲ. ಬಡವರು ಕೂಡಿಟ್ಟ ಹಣದಿಂದ ನಿವೇಶನ ಖರೀದಿ ಮಾಡಿರುತ್ತಾರೆ. ಇವರ ನೀತಿ ನಿಯಮಗಳಿಂದ ಬಡವರು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇದಕ್ಕೆ ನ್ಯಾಯಬದ್ಧ ಪರಿಹಾರ ಒದಗಿಸಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಧೀರಜ್ ಮುನಿರಾಜು ನಗರದಲ್ಲಿ ಕೇವಲ 18 ಬಡಾವಣೆಗಳು ಮಾತ್ರ ಅನುಮತಿ ಪಡೆದು ನಿರ್ಮಾಣ ಮಾಡಲಾಗಿದೆ. ಉಳಿಕೆ ನೂರಾರು ಬಡಾವಣಗಳು ನಗರಸಭೆಯಿಂದ ಅನುಮತಿಯೇ ಪಡೆದಿಲ್ಲ ಹೀಗಾಗಿ ಸಮಸ್ಯೆ ಎದುರಾಗಿದೆ ಎಂದರು. ಎಂಜಿನಿಯರ್ ರಾಮೇಗೌಡ ಉತ್ತರಿಸಿ

ಕಾನೂನಡಿ ಸೆಕ್ಷನ್ ೧೮೭ರ ಪ್ರಕಾರ ಅನಧಿಕೃತ ಕಟ್ಟಡ ಬಗ್ಗೆ ದೂರು ಬಂದರೆ, ಮೂರು ನೋಟಿಸ್ ನೀಡಿ ಕಟ್ಟಡ ತೆರವು ಮಾಡಲಾಗುತ್ತದೆ. ಸೆಕ್ಷನ್ ೧೦೨ ಪ್ರಕಾರ ಎರಡು ಪಟ್ಟು ದಂಡ , ತೆರಿಗೆ ಪಾವತಿಸಿ ಸಕ್ರಮ ಮಾಡಿಕೊಳ್ಳಬಹುದಾಗಿದೆ ಎಂದರು.

ನಗರದ ನಾಗರಕೆರೆಯ ವಿಚಾರಕ್ಕೆ ಸಂಬಂದಿಸಿದಂತೆ ಇಲ್ಲಿನ ಸಂಘಟನೆ ಸದಸ್ಯ ಗಿರೀಶ್ ಎಂಬಾತ ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಸಿರು ನ್ಯಾಯಪೀಠವು ತಪ್ಪು ಮಾಹಿತಿಗಳನ್ನು ನೀಡಿದ್ದೀರಿ ಎಂದು ಛೀಮಾರಿ ಹಾಕಿದೆ ಎಂದು ದೂರಿದರು. ಮಾತನಾಡುವ ರಭಸಲ್ಲಿ ನಗರಸಭಾ ಸದಸ್ಯರು, ಅಧಿಕಾರಿಗಳು ಅಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಅಧಿಕಾರಿಗಳು ಗಿರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಕಾಂಗ್ರೆಸ್ ನ ಯಾವೊಬ್ಬ ಸದಸ್ಯರು ಕೂಡ ಭಾಗವಹಿಸಿರಲಿಲ್ಲ. ಕೈ ಸದಸ್ಯರು ಗೈರಿನ ಬಗ್ಗೆ ವ್ಯಂಗ್ಯವಾಡಿದ ಶಾಸಕ ಧೀರಜ್ ಅವರ ವಾರ್ಡ್ ಗಳಲ್ಲಿ ಸಮಸ್ಯೆ ಇಲ್ಲವೇನು ಅದಕ್ಕೆ ಬಂದಿಲ್ಲ ಎಂದರು.

ಬಳಿಕ ಮಾತನಾಡಿದ ಶಾಸಕ ಧೀರಜ್ ಮುನಿರಾಜು
2011 ರ ಜನಗಣತಿ ಆಧಾರದ ಮೇಲೆ ನಗರಸಭೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಆಯಾ ವಾರ್ಡ್ ಗಳ ನಗರಸಭಾ ಸದಸ್ಯರು ಅಧಿಕಾರಿಗಳ ಜೊತೆ ಸಂವಹನ ಮಾಡಿ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕು. ನಮ್ಮ ನಗರ, ನಮ್ಮ ಊರು ಎಂಬ ಮನೋಬಾವನೆ ಸಾರ್ವಜನಿಕರಲ್ಲಿ ಮೂಡಬೇಕು. ಸದ್ಯ ನಗರದಲ್ಲಿ 17 ಕೋಟಿ 10 ಲಕ್ಷ ರೂ.ಗಳ ಕಾಮಗಾರಿ ನಡೆಯುತ್ತಿದೆ. ಒಳ ಚರಂಡಿ ಮತ್ತು ನೂತನ ಎಸ್ಟಿಪಿ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ 8 ಎಕರೆ ಜಮೀನು ಖರೀದಿಸಲು ಕ್ರಮ ವಹಿಸಲಾಗಿದೆ. ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗದಿದ್ದರೂ ಗರಿಷ್ಠ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ನಗರಸಭೆಗೆ ಬರುವ ಪ್ರತಿಯೊಂದು ಅರ್ಜಿಯೂ ಸಕಾಲದಲ್ಲಿ ನಮೂದಾಗಬೇಕು. ಮುಂದಿನ ದಿನಗಳಲ್ಲಿ ಅಮೃತ್.2 ನಲ್ಲಿ ಅನುದಾನ ಸಿಗಲಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಪಕ್ಷದ ಸದಸ್ಯರಿಗೆ ಅನುದಾನ ನೀಡುತ್ತಿಲ್ಲ. ವಿಪಕ್ಷ ಸದಸ್ಯರಿಗೆ ಅನುದಾನ ಮರಿಚಿಕೆಯಾಗಿದೆ. ರಸ್ತೆಗಳ ಅಭಿವೃದ್ದಿಗೆ
ಪಕ್ಕದ ಮೂರು ತಾಲ್ಲೂಕುಗಳಿಗೆ 20 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ನಮ್ಮ ತಾಲ್ಲೂಕಿಗೆ ಕೇವಲ 10 ಕೋಟಿ ರೂಪಾಯಿ ಅನುದಾನದ ಭರವಸೆ ಸಿಕ್ಕಿದೆ ಎಂದರು.

Related posts